ಚಿತ್ರದುರ್ಗ: ಧಾರವಾಡ ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿರುವುದು ದೇಷದ ರಾಜಕಾರಣದಿಂದ ಅಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ಮಾತನಾಡಿದ ಅವರು, ಯೋಗೆಶ್ ಗೌಡ ಕೊಲೆ ಆದಾಗ ಆಗಿನ ಸಿಎಂ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ರು. ನಮ್ಮ ಬಿಜೆಪಿ ಸರ್ಕಾರ ಫೋನ್ ಕದ್ದಾಲಿಕೆ, ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಮಾತ್ರ ಸಿಬಿಐ ತನಿಖೆಗೆ ನೀಡಿರೋದು ಹೊರತು ಬೇರೆ ಯಾವ ಪ್ರಕರಣಗಳನ್ನು ಸಿಬಿಐಗೆ ನೀಡಿಲ್ಲ. ಅಧಿಕಾರ ಕಳೆದುಕೊಂಡು ಹತಾಶೆಯಿಂದ ಕಾಂಗ್ರೆಸ್-ಜೆಡಿಎಸ್ ನಾಯಕರು ಹೀಗೆ ಮಾತಾಡ್ತಾ ಇದ್ದಾರೆ ಎಂದು ಕೈ-ದಳ ನಾಯಕರಿಗೆ ಟಾಂಗ್ ನೀಡಿದರು.
ಇನ್ನು ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉನ್ನತ ದರ್ಜೆಗೇರಿಸುವ ಭರವಸೆ ನೀಡಿದರು. ನನ್ನ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ವೈದ್ಯರ ನೇಮಕಕ್ಕೆ ಸಿಎಂ ಜೊತೆ ಮಾತಾಡಿದ್ದೇನೆ. ಮೊಳಕಾಲ್ಮೂರು ಸೇರಿದಂತೆ ರಾಜ್ಯದಲ್ಲಿ 300-400 ವೈದ್ಯರ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 2009ರಲ್ಲಿ ಸಚಿವನಾದಾಗ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತಂದಿದ್ದೆ. ಈಗಲೂ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.