ಚಿತ್ರದುರ್ಗ : ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ ಎಸ್ ನವೀನ್ 358 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕೆ.ಎಸ್.ನವೀನ್- 2629 ಮತ, ಕಾಂಗ್ರೆಸ್ ಪಕ್ಷದ ಸೋಮಶೇಖರ್-2271 ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಲ ದುರ್ಗ-16 ಮತಗಳನ್ನು ಪಡೆದಿದ್ದು, 144 ಮತಗಳು ತಿರಸ್ಕೃತಗೊಂಡಿವೆ.
ಬಿಜೆಪಿ ಆಭ್ಯರ್ಥಿ ಕೆ.ಎಸ್.ನವೀನ್ ಅವರು ಮೊದಲ ಪ್ರಾಶಸ್ತ್ಯದಲ್ಲಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಕವೀತಾ ಎಸ್.ಮನ್ನಿಕೇರಿ ಘೋಷಣೆ ಮಾಡಿದರು.
ಇನ್ನೂ ಕೆಎಸ್ ನವೀನ್ ಎರಡು ಬಾರಿ ಸೋಲುಂಡು ಮೂರನೇ ಬಾರಿಯ ಅದೃಷ್ಟ ಪರೀಕ್ಷೆಯಲ್ಲಿ ಜಯ ತನ್ನದಾಗಿಸಿಕೊಂಡಿದ್ದಾರೆ.
ಜಿಲ್ಲೆಯ ಇಬ್ಬರು ಸಚಿವರು, ಶಾಸಕರು, ಸಮಸ್ತ ನಗರಸಭೆ, ಪಪಂ, ಗ್ರಾಪಂ ಸದಸ್ಯರ ಆಶೀರ್ವಾದದಿಂದ ಈ ಗೆಲುವು ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸ್ಥಳೀಯನಾಗಿದ್ದು, ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿದಕ್ಕೆ ಎಲ್ಲರಿಗೂ ವಂದನೆಗಳು ಎಂದು ವಿಜೇತ ಅಭ್ಯರ್ಥಿ ಕೆ ಎಸ್ ನವೀನ್ ಧನ್ಯವಾದ ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಗಾಗಿ 14 ಟೇಬಲ್ಗಳಿದ್ದವು. ಪ್ರತಿ ಟೇಬಲ್‌ಗೆ ಒಬ್ಬ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಎಣಿಕೆ ಸಹಾಯಕರನ್ನು ನೇಮಿಸಲಾಗಿತ್ತು. 14 ಎಣಿಕೆ ಟೇಬಲ್‌ಗಳಿಗೆ ಅಭ್ಯರ್ಥಿಗಳು ತಲಾ ಒಬ್ಬರಂತೆ 14 ಜನ ಎಣಿಕೆ ಏಜೆಂಟರುಗಳನ್ನು ನೇಮಿಸಿಕೊಂಡಿದ್ದರು.
ಪ್ರಾರಂಭಿಕ ಎಣಿಕೆಯು ಎಣಿಕೆ ಟೇಬಲ್‌ಗಳಲ್ಲಿ ನಡೆದು ತದ ನಂತರ ಎಣಿಕೆ ಪ್ರಕ್ರಿಯೆ ಚುನಾವಣಾಧಿಕಾರಿಗಳ ಟೇಬಲ್‌ನಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರದ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳನ್ನು ತೆರೆಯಲಾಗಿತ್ತು. 5,066 ಮತದಾರರ ಪೈಕಿ 5,060 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.
- ಬಿಜೆಪಿ- 2629
- ಕಾಂಗ್ರೆಸ್-2271
- ಪಕ್ಷೇತರ- 16
- ತಿರಸ್ಕೃತ ಮತಗಳು- 144..
ಇದನ್ನೂ ಓದಿ: Council election result: ಬೀದರ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ಗೆ ಗೆಲುವು