ಚಿತ್ರದುರ್ಗ: ಗುಡ್ಕಾ ಡೆಲಿವರಿ ಮಾಡುತ್ತಿದ್ದವನಿಗೆ ಚಾಕುವಿನಿಂದ ಇರಿದು 25 ಲಕ್ಷ ಹಣ ದೋಚಿ ಖದೀಮರು ಪರಾರಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಲೈಬ್ರರಿ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಲಿಸಾಬ್ ಎಂಬುವರಿಗೆ ಚಾಕುವಿನಿಂದ ಇರಿದು ಹಣ ದೋಚಿ ಬೈಕ್ನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಹಿರಿಯೂರು ಸೇರಿದಂತೆ ಬೇರೆ ತಾಲೂಕು ಕೇಂದ್ರಗಳಿಗೆ ಗುಟ್ಕಾ ಡೆಲಿವರಿ ಮಾಡುತ್ತಿದ್ದ ವಾಲಿಸಾಬ್ನನ್ನು ಗುರಿಯಾಗಿಸಿಕೊಂಡ ಖದೀಮರು ತಡರಾತ್ರಿ 25 ಲಕ್ಷ ದೋಚಿ ಪಲ್ಸರ್ ಬೈಕ್ನಲ್ಲಿ ಎಸ್ಕೇಪ್ ಆದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಗುಟ್ಕಾ ವ್ಯಾಪಾರಿ ವಾಲಿಸಾಬ್ಗೆ ತೀವ್ರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಳೆದ ದಿನ ವಲಿಸಾಬ್ ಹೊಸದುರ್ಗದಿಂದ ಆಗಮಿಸಿ ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಆಟೋ ಹತ್ತಿದ ಕ್ಷಣದಿಂದ ಹಿಂಬಾಲಿಸಿದ ಮೂರು ಜನ ಖದೀಮರು, ಮನೆಯ ಬಳಿ ಆಟೋ ಇಳಿಯುವ ವೇಳೆ ಚಾಕುವಿನಿಂದ ಇರಿದು ಹಣ ಲಪಟಾಯಿಸಿದ್ದಾರೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹಿರಿಯೂರು ನಗರ ಪಿಎಸ್ಐ ಮಂಜುನಾಥ್ ಮತ್ತು ಪೊಲೀಸರು ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.