ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲ್ಲಂದೂರು ಗ್ರಾಮದಲ್ಲಿ ದಾರಿಹೋಕರು ಕುಡಿದು ಬಿಸಾಡಿದ ಟಿನ್ನೊಳಗೆ ಕೆರೆ ಹಾವು ತನ್ನ ತಲೆ ಸಿಕ್ಕಿಸಿಕೊಂಡು ಒಂದು ಗಂಟೆಗೂ ಅಧಿಕ ಕಾಲ ತನ್ನ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿದೆ.
ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮಿರಿಂಡಾ ಟಿನ್ ಡಬ್ಬಿಯಲ್ಲಿ ತಲೆಸಿಕ್ಕಿಸಿಕೊಂಡ ಸುಮಾರು 7 ಅಡಿ ಗಾತ್ರದ ಕೆರೆ ಹಾವು ದಾರಿ ಕಾಣದೆ ವಿಲ ವಿಲ ಒದ್ದಾಡುತ್ತಿತ್ತು.
ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದೇ ವೇಳೆಯಲ್ಲಿ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಕೆರೆ ಹಾವನ್ನು ನೋಡಿ ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನು ಟಿನ್ ಡಬ್ಬಿಯಿಂದ ಹೊರತೆಗೆದಿದ್ದಾರೆ.
ಶ್ರೀದೇವ್ ಅವರ ಪತ್ನಿ, ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಟಿನ್ಅನ್ನು ಒತ್ತಿ ಹಿಡಿದಿದ್ದಾರೆ. ಶ್ರೀದೇವ್ ಅವರು ಹಾವಿನ ಬಾಲ ಹಿಡಿದು ಎಳೆದಿದ್ದಾರೆ. ಈ ಮೂಲಕ ದಂಪತಿ ಉರಗ ಪ್ರೇಮವನ್ನು ಮೆರದಿದ್ದಾರೆ.