ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕು ಕೇಂದ್ರವನ್ನು ಕೂಡಲೇ ಗೆಜೆಟ್ ನೋಟಿಫಿಕೇಷನ್ ಮೂಲಕ ಕಾರ್ಯರೂಪಕ್ಕೆ ಬರುವಂತೆ ಮಾಡಲು ಒತ್ತಾಯಿಸಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಪತ್ರ ಚಳವಳಿ ನಡೆಸುತ್ತಿದೆ.
ಕಳಸದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಳಸ ನಗರದಲ್ಲಿ ಸಾರ್ವಜನಿಕರಿಂದ ಪೋಸ್ಟ್ ಕಾರ್ಡ್ನಲ್ಲಿ ಸಹಿ ಸಂಗ್ರಹ ಮಾಡಿ, ಸಿಎಂ ಯಡಿಯೂರಪ್ಪನವರಿಗೆ ಪೋಸ್ಟ್ ಮಾಡಿದ್ದಾರೆ. ಈ ಹಿಂದಿನ ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಕಳಸವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿತ್ತು. ಆದರೆ ಇಲ್ಲಿಯ ಶಾಸಕರು ಮತ್ತು ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ತಾಲೂಕು ಕೇಂದ್ರವನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಸರ್ಕಾರವನ್ನು ಎಚ್ಚರಿಸುವ ದೃಷ್ಟಿಯಿಂದ, ಪತ್ರ ಚಳವಳಿ ಮಾಡುತ್ತಿದ್ದು, ಕೂಡಲೇ ಕಳಸ ತಾಲ್ಲೂಕು ಕೇಂದ್ರ ಕಾರ್ಯಾರಂಭವಾಗಬೇಕಿದೆ ಎಂದು ಆಗ್ರಹಿಸಿದರು.