ಚಿಕ್ಕಮಗಳೂರು: ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳನ್ನು ತಂದು ಸುರಿಯಲಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಸಾರ್ವಜನಿಕರು ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಒಂದೇ ಜಾಗದಲ್ಲಿ ನೂರಾರು ನೂರಾರು ಮೃತ ಪಾರಿವಾಳಗಳನ್ನು ಸುರಿದು ಹೋಗಿರುವುದು ಕಂಡು ಬಂದಿದೆ. ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆಯ ಮೇಲ್ವಿಚಾರಕರು, ಸತ್ತ ಪಾರಿವಾಳಗಳು ಕೊಳೆತು ಕೆರೆಯ ನೈರ್ಮಲ್ಯ ನಾಶವಾಗುವುದಲ್ಲದೇ, ರೋಗ ರುಜಿನಗಳು ಹರಡುತ್ತವೆ ಎಂದು ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.
ಮೃತಪಟ್ಟಿರುವ ನೂರಾರು ಪಾರಿವಾಳಗಳನ್ನು ಯಾರು ಇಲ್ಲಿಗೆ ತಂದು ಎಸೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಅದು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಭರವಸೆಯನ್ನು ಎಸ್ಪಿ ಹರೀಶ್ ಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.