ಚಿಕ್ಕಬಳ್ಳಾಪುರ : ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ಆಫ್ ಮಾಡಿದ ಹಿನ್ನೆಲೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಉಪ್ಪುಕುಂಟಪಲ್ಲಿ ಗ್ರಾಮದ ಗಂಗುಲಮ್ಮ (70) ಎಂಬುವರು ಸಾವನ್ನಪ್ಪಿದ ವೃದ್ಧೆ. ಉಪ್ಪಕುಂಟಪಲ್ಲಿ ಗ್ರಾಮದ ನಿವಾಸಿ ಗಂಗುಲಮ್ಮ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.
ರಾತ್ರಿ ಪಾಳೆಯಲ್ಲಿದ್ದ ಸಿಬ್ಬಂದಿ ಪ್ರಕಾಶ್ ಎಂಬುಬವರು ಆಕ್ಸಿಜನ್ ಆಫ್ ಮಾಡಿದ್ದಾನೆ. ಇದರಿಂದ ಮೊದಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಗಂಗುಲಮ್ಮ ಸಾವನ್ನಪ್ಪಿದ್ದಾರೆ ಎಂದು ಕುಟಂಬಸ್ಥರು ಆರೋಪಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ವೈದ್ಯರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವೈದ್ಯಕೀಯ ಆಡಳಿತಾಧಿಕಾರಿ ಸಂತೋಷ್ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸದ್ಯ ವೈದ್ಯಕೀಯ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಶಿಲ್ಪ ಎಂಬುವರ ವಿರುದ್ಧವೂ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.