ಚಿಕ್ಕಬಳ್ಳಾಪುರ/ಚಿಂತಾಮಣಿ: ಕೊರೊನಾ ಸೋಂಕಿಗೆ ಚಿಕ್ಕಬಳ್ಳಾಪುರದ 58 ವರ್ಷದ ಉಪನ್ಯಾಸಕ ಮತ್ತು ಚಿಂತಾಮಣಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಚಿಂತಾಮಣಿಯಲ್ಲಿ ಇದೇ ಮೊದಲ ಸಾವಾಗಿದೆ. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿದೆ.
ಇಬ್ಬರೂ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ಚಿಂತಾಮಣಿ ತಾಲೂಕಿನ ಉಪ್ಪಾರಪೇಟೆಯ 55 ವರ್ಷದ ಮಹಿಳೆಗೆ ಸೊಂಕು ದೃಢಪಟ್ಟಿದ್ದು, ತಾಲೂಕಿನ ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರಕ್ಕೆ ರವಾನಿಸಿದ್ದರು. ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಾಲೂಕು ದಂಡಾಧಿಕಾರಿ ಡಿ.ಹನುಮಂತರಾಯಪ್ಪ, ಗ್ರಾಮ ಪಂಚಾಯತ್ ಸಿಬ್ಬಂದಿ ಮತ್ತು ಕಂದಾಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತ ವ್ಯಕ್ತಿ ವಾಸವಿದ್ದ ರಸ್ತೆಯನ್ನು ಸೀಲ್ ಡೌನ್ ಮಾಡಿಸಿದ್ದಾರೆ. ಅಲ್ಲದೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 186ಕ್ಕೆ ಏರಿಕೆಯಾಗಿದ್ದು, 158 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 25 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಈವರೆಗೂ 4 ಹಾಗೂ ಅನ್ಯ ಕಾರಣದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.