ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಬರಗಾಲದ ಛಾಯೆ ಆವರಿಸಿದ್ದು, ಕುಡಿಯುವ ನೀರಿಗೆ, ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ತೆರೆಯಲು ಯೋಜನೆ ರೂಪಿಸಿದೆ.
ಇಂದು ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸರ್ಕಾರದ ನೂತನ ಮೇವು ಬ್ಯಾಂಕ್ ಪ್ರಾರಂಭವಾಗಿದೆ. ನಗರದ ಎಪಿಎಂಸಿ ಆವರಣದಲ್ಲಿ "ಸಮೃದ್ಧ ಮೇವು ಗೋವುಗಳ ನಲಿವು" ಯೋಜನೆಯಡಿ ಮೇವನ್ನು ವಿತರಿಸುವ ಮೂಲಕ ತಾಲೂಕಿನ ತಹಸೀಲ್ದಾರ್ ಮೇವು ಬ್ಯಾಂಕ್ ಉದ್ಘಾಟಿಸಿದರು.
ಈ ಭಾಗದಲ್ಲಿ ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತಾಪಿ ಜನ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಮುಂಗಾರು ಬಂದರೂ ಸರಿಯಾಗಿ ಮಳೆಯಾಗದೆ ಜನತೆ ಚಿಂತೆಯಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮೇವಿನ ಬೇಡಿಕೆ ಹೆಚ್ಚಾದರೆ ಹಂತ ಹಂತವಾಗಿ ಸರಬರಾಜು ಮಾಡಲಾಗುವುದು. ಜಾನುವಾರುಗಳನ್ನು ಸಾಕಿರುವ ರೈತರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ನೀಡಿ, ಹುಲ್ಲು ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.