ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ದಿಬ್ಬೂರು ಗ್ರಾಮಪಂಚಾಯತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ದಿಬ್ಬೂರು ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಆರ್. ಆಶಾರವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಂಚಾಯಿತಿಗೆ ಬೀಗ ಹಾಕಿ ಮುಂಜಾನೆಯಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿರುವ ಆಶಾ ಕಳೆದ ಎರಡು ವರ್ಷಗಳಿಂದ ದಿಬ್ಬೂರು ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರ ಸೇವಾವಧಿಯಲ್ಲಿ ಹಲವಾರು ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಅದು ಅಲ್ಲದೆ ನರೇಗಾ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ತಾವೇ ಸ್ವಯಂ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಜಾಬ್ ಕಾರ್ಡ್‌ಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಅವರ ವರ್ಗಾವಣೆಯನ್ನು ರದ್ದುಗೊಳಿಸದಿದ್ದರೆ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.