ಚಿಂತಾಮಣಿ (ಚಿಕ್ಕಬಳ್ಳಾಪುರ) : ಚಿಂತಾಮಣಿ ನಗರ, ಹೊಸಕೋಟೆ, ವೇಮಗಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಜೋಡಿ ಕಾಚಹಳ್ಳಿ ಗ್ರಾಮದ ನರಸಿಂಹಮೂರ್ತಿ (33) ಕಳ್ಳತನ ಮಾಡುತ್ತಿದ್ದ ಆರೋಪಿ. ನಗರದ ಬಾಗೇಪಲ್ಲಿ ವೃತ್ತದ ಕಡೆ ಪೊಲೀಸರು ಗಸ್ತು ಮಾಡುತ್ತಿದ್ದಾಗ, ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದ ಆರೋಪಿ ನರಸಿಂಹಮೂರ್ತಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಬೈಕ್ ಕಳ್ಳತನ ಮಾಡಿ ಕಡಿಮೆ ಬೆಲೆಯಲ್ಲಿ ಬೈಕ್ ಗಳನ್ನು ಮಾರಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾನೆ.
ತನ್ನ ಸಹಚರನಾದ ನಗರದ ಟೊಮ್ಯಾಟೊ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ನವೀನ್(23), ಇಬ್ಬರು ಜೊತೆಗೂಡಿ ವಾಹನಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಇಬ್ಬರಿಂದ ಸುಮಾರು14 ಲಕ್ಷ ಬೆಲೆ ಬಾಳುವ 33 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಡಿ ವೈ ಎಸ್ಪಿ ವಿ ಲಕ್ಷ್ಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸದರಿ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ದ್ವಿಚಕ್ರ ವಾಹನಗಳ ಪತ್ತೆಗೆ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಜಿ ಎನ್ ಆನಂದ್ ಕುಮಾರ್ , ಸಬ್ ಇನ್ಸ್ ಪೆಕ್ಟರ್ ಆರ್ ನಾರಾಯಣಸ್ವಾಮಿ, ಪಿ ಎಸ್ ಐ ಚಂದ್ರಕಳಮ್ಮ, ಸಿಬ್ಬಂದಿಯಾದ ವಿಶ್ವನಾಥ್ , ನಾಗಭೂಷಣ್, ಮಂಜುನಾಥ್, ಚೌಡರೆಡ್ಡಿ , ಸರ್ವೇಶ್ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದು ಜಿಲ್ಲಾವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನವನ್ನು ಘೋಷಿಸಿದ್ದಾರೆ.