ಚಿಕ್ಕಬಳ್ಳಾಪುರ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಪುರಸಭೆ, ನಗರಸಭೆಗಳ ಆಶ್ರಯದಲ್ಲಿ ಕೋವಿಡ್ ಅರಿವು ಮೂಡಿಸುವ ಕಾರ್ಯ ನಡೆಯಿತು. ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಲಾಯಿತು.
ಜಿಲ್ಲೆಯ ಬಾಗೇಪಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ನಗರ ಸೇರಿದಂತೆ ಗೌರಿಬಿದನೂರು ನಗರದ ಗಾಂಧಿ ವೃತ್ತ, ನಾಗಯ್ಯರೆಡ್ಡಿ ವೃತ್ತ, ಹಳೇ ರಸ್ತೆ ಸೇರಿ ವಿವಿಧ ವೃತ್ತಗಳಲ್ಲಿ ಅಧಿಕಾರಿಗಳು ವಾಹನ ಸವಾರರಿಗೆ ಹಾಗೂ ನಾಗರಿಕರಿಗೆ ಕೋವಿಡ್ ಅರಿವು ಮೂಡಿಸುವುದರ ಜೊತೆಗೆ ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಿದರು.
ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಹಾಗೂ ಗ್ರಾಹಕರಿಗೆ ಮಾಸ್ಕ್ ಧರಿಸಿ ಬರುವಂತೆ ಮಾಹಿತಿ ನೀಡಬೇಕು ಎಂಬ ಸೂಚನೆ ನೀಡಿದರು. ತಪ್ಪಿದಲ್ಲಿ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಕಾರ್ಯಕರ್ತರು ಪಟ್ಟಣದ ಪ್ರತಿ ಮನೆಗೂ ಭೇಟಿ ನೀಡಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸ್ವಯಂ ಆರೋಗ್ಯ ಸಂರಕ್ಷಣೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಆರಂಭಿಸುವಂತೆ ಸೂಚಿಸಲಾಗಿದೆ. ನಾಗರಿಕರು ಆರೋಗ್ಯ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು. ಎಲ್ಲರೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಭೆ, ಸಮಾರಂಭ, ಮದುವೆ ಇತರ ಕಾರ್ಯಕ್ರಮದಲ್ಲಿ ಜನ ಸೇರದಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಅಂತರ ಕಾಯ್ದುಕೊಂಡು, ಮುಖಗವಸು ಧರಿಸಿ ನಿತ್ಯದ ಕಾಯಕ ಮಾಡಬೇಕು ಎಂದು ಗೌರಿಬಿದನೂರು ತಹಶೀಲ್ದಾರ್ ಹೆಚ್.ಶ್ರೀನಿವಾಸ್ ಸಲಹೆ ನೀಡಿದ್ದಾರೆ.
45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಹಾಗೆಯೇ ಸ್ವಯಂ ಪ್ರೇರಿತರಾಗಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಧಿಕಾರಿಗಳನ್ನು ಕಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ಸ್ಥಳದಿಂದ ಕಾಲ್ಕಿತ್ತಿದ್ದು ಕಂಡು ಬಂತು.