ಬಾಗೇಪಲ್ಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಚಟುವಟಿಕೆಗಳು ಮುಂದೂಡಲ್ಪಟ್ಟಿದ್ದು, ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬ ಕುತೂಹಲ ಆಕಾಂಕ್ಷಿಗಳಲ್ಲಿ ಮೂಡಿದೆ.
ಜೂನ್ 2 ನೇ ವಾರದಲ್ಲಿ ಖಾಲಿಯಾಗುವ 16 ವಿಧಾನ ಪರಿಷತ್ ಸ್ಥಾನ, 4 ರಾಜ್ಯಸಭೆ ಸ್ಥಾನಕ್ಕೆ ಜೂನ್ ಮಾಸಾಂತ್ಯದೊಳಗೆ ಚುನಾವಣೆ ನಡೆಸಿ, ಹೊಸ ಸದಸ್ಯರು ಆಯ್ಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಇದೇ ರೀತಿ ನಡೆಯುವ ಪರಿಷತ್ ಚುನಾವಣೆಗೆ ಆಯೋಗ ಅನುಮತಿ ನೀಡಿರುವುದರಿಂದ ರಾಜ್ಯದಲ್ಲಿಯೂ ಚುನಾವಣೆ ನಡೆಸಬಹುದು ಎಂಬ ನಿರೀಕ್ಷೆ ಆಕಾಂಕ್ಷಿಗಳಲ್ಲಿದೆ.
ವಿಧಾನಪರಿಷತ್ನ ಸದಸ್ಯತ್ವಕ್ಕಾಗಿ ಜೂನ್ ತಿಂಗಳಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ತುಮಕೂರಿನ ಬಿಜೆಪಿ ಮುಖಂಡ ಹಾಲನೂರು ಲೇಪಾಕ್ಷ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ತುಮಕೂರಿನವರೇ ಆದ ಮತ್ತೊಬ್ಬ ಬಿಜೆಪಿ ಮುಖಂಡ ಚಿದಾನಂದ್.ಎಂ.ಗೌಡ ಕೂಡ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರಿಗೆ ತಲೆ ನೋವು ಸೃಷ್ಟಿ ಮಾಡುವ ಸಾಧ್ಯತೆ ಇದೆ.
ಶಿಕ್ಷಣ ತಜ್ಞರು, ಸಮಾಜ ಸೇವಕರು, ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ಚಿದಾನಂದ್.ಎಂ.ಗೌಡ ಅವರ ಪರಿಚಯ ಕಾರ್ಯಕ್ರಮ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಎಂಎಲ್ಸಿ ವೈ.ಎ.ನಾರಾಯಣ ಸ್ವಾಮಿ ಮಾತನಾಡಿ, ಸಮಾಜ ಸುಧಾರಣೆಗೆ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣವೊಂದೇ ಪರಿಹಾರ. ಶಿಕ್ಷಕನೊಬ್ಬನೆ ಸೂತ್ರಧಾರ. ಇದನ್ನು ದೃಢವಾಗಿ ನಂಬಿರುವ ಶಿಕ್ಷಣ ತಜ್ಞರು, ಸಮಾಜ ಚಿಂತಕರಾಗಿರುವ ಚಿದಾನಂದ್. ಎಂ.ಗೌಡ ಇವರ ಗೆಲುವು ಸಾಧಿಸಿವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.