ಚಿಕ್ಕಬಳ್ಳಾಪುರ : ಬಿಜೆಪಿ ಶಾಸಕರು ಕೈ ನಾಯಕರ ಸಂಪರ್ಕದಲ್ಲಿದ್ದ ಮಾತ್ರಕ್ಕೆ ಜೊತೆಯಲ್ಲಿ ಹೋಗ್ತಾರೆ ಎಂಬ ಸಂದೇಶ ಹೋಗಲ್ಲ. ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿ ಕೊಡಲಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಉಸ್ತುವಾರಿ ಜವಾಬ್ದಾರಿ ಕೈತಪ್ಪಿದ ನಂತರ ಮೊದಲ ಬಾರಿ ಸ್ವಕ್ಷೇತ್ರಕ್ಕೆ ಸಚಿವರು ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿಯಾಗಿ ಎಂಟಿಬಿ ನಾಗರಾಜ್ ಅವರು ನೇಮಕ ಆಗಿದ್ದಾರೆ. ಇದರಿಂದ ನಮ್ಮ ಅಭಿಮಾನಿಗಳಿಗೆ, ನನ್ನ ಜೊತೆ ಇರುವವರಿಗೆ ಬೇಸರವಾಗಿದೆ.
ಆದರೆ, ನಾನೇನು ಬಿಟ್ಟು ಹೋಗುವುದಿಲ್ಲ. ಮತ್ತೆ ಮತ್ತೆ ಜಿಲ್ಲೆಗೆ ಬರುತ್ತೇನೆ. ಜಿಲ್ಲಾ ಉಸ್ತುವಾರಿ ಅಧಿಕಾರ ಇಲ್ಲದಿದ್ದರೂ ಕೂಡ ಇಲ್ಲಿನ ಅಭಿವೃದ್ಧಿಗೆ ಕಂಕಣ ಬದ್ಧವಾಗಿದ್ದೇನೆ. ಬಿಜೆಪಿಯಿಂದ ಇಂತಹ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಅಂದರೆ ನಾವು ವ್ಯಾಖ್ಯಾನಿಸಬಹುದು. ಎದುರಲ್ಲಿ ಸಿಕ್ಕಾಗ ಮಾತನಾಡುವುದು ಬೇರೆ, ರಾಜಕೀಯವೇ ಬೇರೆ, ವಿಶ್ವಾಸ ಬೇರೆ. ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿ ಕೊಡಲಿ. ಚುನಾವಣೆ 15 ತಿಂಗಳು ಇದೆ. ಚಾಲ್ತಿಯಲ್ಲಿರಬೇಕು ಎಂದು ಕಾಂಗ್ರೆಸ್ನವರು ಮಾತನಾಡುತ್ತಾರೆ ಎಂದರು.
ಮುಖ್ಯಂತ್ರಿಗಳ ಬದಲಾವಣೆ ವಿಚಾರ ಸಂಪೂರ್ಣ ಗಾಳಿ ಸುದ್ದಿ, ಯಾವ ಮೂರ್ಖರು ಮೂರು ತಿಂಗಳಲ್ಲಿ, ಆರು ತಿಂಗಳಿಗೆ ಒಬ್ಬ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಅಸಾಧ್ಯ ಎಂದರು.
ನೀತಿ ಆಯೋಗ ಬಿಡುಗಡೆ ಮಾಡಿರುವ ಆರೋಗ್ಯ ಸೂಚಂಕ್ಯದಲ್ಲಿ ಎಂಟನೇ ಸ್ಥಾನದಲ್ಲಿದ್ದ ಭಾರತ, 9ನೇ ಸ್ಥಾನಕ್ಕೆ ಕುಸಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಮ್ಮ ರಾಜ್ಯದಲ್ಲಿ ಆರೂ ಜಿಲ್ಲೆಗಳು ಅಪೌಷ್ಟಿಕತೆಯಿಂದ ಕೆಲವು ದುಷ್ಪರಿಣಾಮ ಉಂಟಾಗಿದೆ. ಅದಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಈಗಾಗಲೇ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದೇವೆ. ಮಂದಿನ ವರ್ಷ ಮೂರನೇ ಸ್ಥಾನಕ್ಕೆ ಬರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಶುದ್ಧ ಸುಳ್ಳು, ಇದು ಮಾಧ್ಯಮಗಳ ಸೃಷ್ಟಿ: ಸಿಎಂ ಬೊಮ್ಮಾಯಿ
ಕಳೆದೆರಡು ದಿನಗಳ ಹಿಂದೆ ಸಿಎಂ ಬೊಮ್ಮಾಯಿಯವರು ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಿದ್ದು, ಹಿಂದೆ ಜಿಲ್ಲೆಗಳ ಉಸ್ತುವಾರಿ ಅಧಿಕಾರ ವಹಿಸಿದ್ದವರನ್ನು ಅದಲು-ಬದಲು ಮಾಡಿದ್ದಾರೆ.
ಸದ್ಯ ಜಿಲ್ಲೆಯ ಉಸ್ತುವಾರಿಯಾಗಿದ್ದ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿಯಾಗಿ ಹಾಗೂ ಜಿಲ್ಲೆಗೆ ಸಚಿವ ಎಂಟಿಬಿ ನಾಗರಾಜ್ ಅವರನ್ನು ಹೊಸ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ