ಚಿಕ್ಕಬಳ್ಳಾಪುರ: ರೋಷನ್ ಬೀಡಿ ಹೆಸರಿನಲ್ಲಿ ನಕಲಿ ಬೀಡಿಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಮುಳಬಾಗಿಲಿನ ಶಹಬಾಜ್ ಎಂಬುವರು ತಮ್ಮ ತಂದೆಯ ಕಾಲದಿಂದಲೂ ಸುಮಾರು 40 ವರ್ಷಗಳಿಂದ ಬೀಡಿಗಳನ್ನು ಕಟ್ಟಿ ಮಾರಾಟ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ವ್ಯಾಪಾರ ಸ್ಥಗಿತಗೊಂಡ ಹಿನ್ನೆಲೆ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ರೋಷನ್ ಸಂಸ್ಥೆಯ ಹೆಸರು ಬಳಕೆ ಮಾಡಿ ಚಿಂತಾಮಣಿ ತಾಲೂಕಿನ ಕುರುಬೂರು ಗ್ರಾಮದಲ್ಲಿ ನಕಲಿ ಬೀಡಿಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಬಾಬು, ಸನಾವುಲ್ಲಾ, ಚಿಂತಾಮಣಿಯ ಶೇಖ್ ಇಸ್ಮಾಯಿಲ್, ಸಿರಾಜ್, ಪೈರೋಜ್ ಹಾಗೂ ಶ್ರೀನಿವಾಸಪುರದ ಸದಾಕತ್ ಎಂಬುವರು ನಕಲಿ ಬಿಡಿ ಮಾರಾಟಗಾರರು ಎಂದು ತಿಳಿದು ಬಂದಿದೆ. ಸದ್ಯ ಮಾಲೀಕ ಶಹಬಾಜ್ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನಕಲಿ ಬೀಡಿ ಮಾರಾಟಗಾರರ ಪತ್ತೆಗೆ ಬಲೆ ಬೀಸಿದ್ದಾರೆ.