ಚಿಕ್ಕಬಳ್ಳಾಪುರ: ಪೊಲೀಸ್ ಇನ್ಸ್‌ಪೆಕ್ಟರ್ ನನ್ನ ಗಂಡ ಎಂದು ಹೇಳಿಕೊಂಡು ಮಹಿಳೆಯರ ಬಳಿ ಸುಮಾರು 7 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿ ರಾತ್ರೋರಾತ್ರಿ ಮಹಿಳೆಯೊಬ್ಬಳು ಮನೆ ಬಿಟ್ಟು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಬೆಳೆಕಿಗೆ ಬಂದಿದೆ.
ಶಿಡ್ಲಘಟ್ಟ ನಗರದ ಸಿ.ಆರ್ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನಾಲ್ಕು ತಿಂಗಳಿಂದ ವಾಸವಾಗಿದ್ದ ಸವಿತ ಅಲಿಯಾಸ್ ಜಲಜಾಕ್ಷಿ ಎಂಬ ಮಹಿಳೆ ಶಿಡ್ಲಘಟ್ಟದಲ್ಲಿ ಸುಮಾರು 540 ಜನ ಮಹಿಳೆಯರಿಗೆ ಬ್ಯಾಂಕ್ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ತಲಾ ಒಬ್ಬರಿಂದ 1300 ರೂಪಾಯಿಗಳಂತೆ ಒಟ್ಟು 7 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿ ಇದ್ದಕ್ಕಿದಂತೆ ರಾತ್ರೋರಾತ್ರಿ ಮನೆಯನ್ನು ಖಾಲಿ ಮಾಡಿದ್ದಾಳೆ.
ಜಲಜಾಕ್ಷಿ ಎರಡು ದಿನಗಳಿಂದ ಕಾಣದ ಕಾರಣ ಮಹಿಳೆ ಎಸ್ಕೇಪ್ ಆಗಿದ್ದಾಳೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಖತರ್ನಾಕ್ ಮಹಿಳೆ ಮೈಸೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಸೇರಿದಂತೆ ಸುಮಾರು 40 ಕಡೆ ಇದೇ ರೀತಿಯಾಗಿ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದಾಳೆ ಎನ್ನಲಾಗ್ತಿದೆ.
ಮೋಸ ಹೋಗಿದ್ದೇವೆಂದು ತಿಳಿದ ಮಹಿಳೆಯರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ಜಲಜಾಕ್ಷಿ ಬಂಧನಕ್ಕೆ ಬಲೆ ಬೀಸಿದ್ದಾರೆ.