ಚಾಮರಾಜನಗರ: ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಚಾಮರಾಜನಗರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದರೆ, ಕೊಳ್ಳೇಗಾಲದಲ್ಲಿ ಕೂಡ ಬಂಡಾಯವಾಗಿ ಟಿಕೆಟ್ ವಂಚಿತ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೌದು.. ಚಾಮರಾಜನಗರ ಕ್ಷೇತ್ರದಲ್ಲಿ ಪ್ರೊ.ಮಲ್ಲಿಕಾರ್ಜುನಪ್ಪ, ನಾಗಶ್ರೀ ಪ್ರತಾಪ್, ರಾಮಚಂದ್ರು, ಡಾ.ಎ.ಆರ್.ಬಾಬು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದರು. ಜೊತೆಗೆ, ಇವರೆಲ್ಲರ ಹೆಸರು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಆದರೆ, ಅಚ್ಚರಿ ಬೆಳವಣಿಗೆಯಲ್ಲಿ ಸಚಿವ ಸೋಮಣ್ಣಗೆ ಎರಡು ಟಿಕೆಟ್ ಕೊಡುವ ಮೂಲಕ ಮಹತ್ವದ ಹೊಣೆ ವಹಿಸಿದೆ. ಆದರೆ, ಸೋಮಣ್ಣಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದು, ಟಿಕೆಟ್ ವಂಚಿತರ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ನಾಗಶ್ರೀ ಪ್ರತಾಪ್ ಬೆಂಬಲಿಗರು ಇಂದು ಸಭೆ ನಡೆಸಲಿದ್ದು, ರುದ್ರೇಶ್ ಹಾಗೂ ಪ್ರೊ.ಮಲ್ಲಿಕಾರ್ಜುನಪ್ಪ ಕೂಡ ಮತ್ತೊಂದು ಕಡೆ ಮೀಟಿಂಗ್ ಮಾಡಲಿದ್ದಾರೆ. ಇಂದು ಸೋಮಣ್ಣ ಚಾಮರಾಜನಗರಕ್ಕೆ ಬರುತ್ತಿದ್ದು, ಇವರಿಗೆ ಭಿನ್ನಮತದ ಸ್ವಾಗತ ಸಿಗುತ್ತಿದೆ.
ಕೊಳ್ಳೇಗಾಲದಲ್ಲಿ ಬಂಡಾಯ ಅಭ್ಯರ್ಥಿ: ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರಕ್ಕೆ ಎನ್.ಮಹೇಶ್ ಹಾಗೂ ಕಿನಕಹಳ್ಳಿ ರಾಚಯ್ಯ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಹಾಲಿ ಶಾಸಕ ಎನ್. ಮಹೇಶ್ ಅವರಿಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ರಾಚಯ್ಯ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಕೆಲವರು ಬೇರೆ ಪಕ್ಷದ ವಾಹನದಲ್ಲಿ ಕುಳಿತು ಪಕ್ಷಕ್ಕೆ ಚೂರಿ ಹಾಕುತ್ತಿದ್ದಾರೆ: ಯತ್ನಾಳ
ಈ ಬಗ್ಗೆ ಸ್ಪಷ್ಟಪಡಿಸಿರುವ ರಾಚಯ್ಯ, ಜನಾಭಿಪ್ರಾಯ, ಸರ್ವೇಗಳು ಎಲ್ಲವೂ ನನ್ನ ಪರವಾಗಿಯೇ ಬಂದಿತ್ತು, ಮೂರು ಬಾರಿ ಟಿಕೆಟ್ ತಪ್ಪಿಸಿಕೊಳ್ಳುತ್ತಿದ್ದು ಈ ಭಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ. ಜನರ ತೀರ್ಮಾನ ನೋಡೋಣ ಎಂದಿದ್ದಾರೆ. ಇನ್ನು ಗುಂಡ್ಲುಪೇಟೆ ಹಾಗೂ ಹನೂರಿನಲ್ಲೂ ಅಸಮಾಧಾನದ ಹೊಗೆ ಎದ್ದಿದ್ದು ಕಮಲ ಕಲಿಗಳಿಗೆ ಒಳ ಏಟು ಎಷ್ಟು ಪ್ರಮಾಣದಲ್ಲಿ ಬೀಳಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ಎರಡೂ ಕ್ಷೇತ್ರಗಳಿಂದ ಅಖಾಡಕ್ಕೆ ಇಳಿದಿರುವ ಸೋಮಣ್ಣ: ಸಚಿವ ಸೋಮಣ್ಣನವರಿಗೆ ಚಾಮರಾಜನಗರವಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವರುಣಾದಲ್ಲಿ ಟಿಕೆಟ್ ಸಿಕ್ಕಿದೆ. ಎರಡೂ ಕ್ಷೇತ್ರದಲ್ಲಿಯೂ ಸಮನಾಗಿ ಪೈಪೋಟಿ ನೀಡುವುದಲ್ಲದೇ ಪ್ರಚಾರದಿಂದ ಹಿಡಿದು ಜನರನ್ನು ಮನವೊಲಿಸುವ ಮೂಲಕ ಸಂಬಾಳಿಸಬೇಕಾಗಿದೆ. ಇದಲ್ಲದೇ, ಚಾಮರಾಜನಗರದಲ್ಲಿ ಕೈ ತಪ್ಪಿದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸೋಮಣ್ಣನ ವಿರುದ್ಧ ಗಂಭೀರ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ.
ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಎದ್ದಿದ್ದು, ಟಿಕೆಟ್ ವಂಚಿತರು ಸಾಲು ಸಾಲು ತುರ್ತು ಸಭೆ ನಡೆಸುತ್ತಿದ್ದಾರೆ. ಇದನ್ನೇ ಹಿಡಿತವಾಗಿಟ್ಟುಕೊಂಡ ಕಾಂಗ್ರೆಸ್ ಪಕ್ಷವು ಸೋಮಣ್ಣ ಅವರು ಚಾಮರಾಜನಗರದಲ್ಲಿರುವ ಸಮಸ್ಯೆಗಳನ್ನೇ ಪರಿಹರಿಸುವಲ್ಲಿ ಸಮಯ ಕಳೆಯುತ್ತಾರೆ. ಹೀಗಾಗಿ ಅವರ ಇನ್ನೊಂದು ಕ್ಷೇತ್ರ ವರುಣಾದತ್ತ ಗಮನ ಹರಿಸಲು ಅಸಾಧ್ಯವಾಗಲಿದೆ ಎಂಬ ತಂತ್ರ ಹೂಡುತ್ತಿದೆ. ಇದೆಲ್ಲವು ಸಚಿವರಿಗೆ ಸವಾಲಾಗಿದ್ದು, ಅವರು ಚಾಮರಾಜನಗರದ ಆರೋಪಗಳನ್ನಲದೇ ಇತ್ತ ಕಾಂಗ್ರೆಸ್ನ ಮಾಸ್ ಲೀಡರ್ ಜೊತೆನೂ ಹೋರಾಡಬೇಕಾಗಿದೆ.
ಇದನ್ನೂ ಓದಿ: ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿಲ್ಲ: ಬಿ ವೈ ವಿಜಯೇಂದ್ರ