ಚಾಮರಾಜನಗರ: ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್ ಪಲ್ಟಿಯಾಗಿ 12 ಮಂದಿ ಗಾಯಗೊಂಡಿದ್ದರೆ ಅವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ನರೀಪುರದಿಂದ 14 ಮಂದಿ ಕೂಲಿ ಕಾರ್ಮಿಕರನ್ನು ಕಬ್ಬು ಕಟಾವಿಗೆ ಕೂಲಿ ಕಾರ್ಮಿಕರನ್ನು ಟಾಟಾ ಏಸ್ ವಾಹನದಲ್ಲಿ ಕರೆತರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ. 12 ಮಂದಿಗೆ ಗಾಯಗೊಂಡಿದ್ದು, ಅದರಲ್ಲಿ 6 ಕಾರ್ಮಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ.
ಉಳಿದ ಗಾಯಾಳುಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕ ಆರ್. ನರೇಂದ್ರ ಭೇಟಿ ನೀಡಿದ್ದಾರೆ. ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.