ಚಾಮರಾಜನಗರ/ ಧರ್ಮಪುರಿ: ಪ್ರಸಿದ್ಧ ಪ್ರವಾಸಿ ಕೇಂದ್ರವಾದ ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉಮೇಶ್(24) ಮೃತಪಟ್ಟಿರುವ ಯುವಕನಾಗಿದ್ದು, 16 ವರ್ಷದ ಚಾಮುಂಡಿಪುರದ ಬಾಲಕಿಯನ್ನು ತಮಿಳುನಾಡಿನ ಧರ್ಮಪುರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಮೇಶ್ ಹಾಗೂ ಬಾಲಕಿ ಕನಕಪುರ ಮೂಲದವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಹೊಗೆನಕಲ್ ಜಲಪಾತದ ಬಂಡೆಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇವರಿಬ್ಬರು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕಿ ಮತ್ತು ಉಮೇಶ್ನನ್ನು ಚಿಕಿತ್ಸೆಗಾಗಿ ಪೆನ್ನಾಗರಂ ಸರ್ಕಾರಿ ಆಸ್ಪತ್ರಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯದಲ್ಲೆ ಯುವಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧರ್ಮಪುರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಗೇನೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ವಿಜಯಪುರದಲ್ಲೂ ಇಂತಹದ್ದೇ ಘಟನೆ: ಇತ್ತೀಚೆಗೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ನಡೆದ ಘಟನೆಯೊಂದರಲ್ಲಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. 17 ವರ್ಷದ ಹುಡುಗ ಹಾಗೂ 15 ವರ್ಷದ ಬಾಲಕಿ ಮೃತಪಟ್ಟಿದ್ದರು. ಪ್ರೇಮಿಗಳಿಬ್ಬರು ಮನೆಯಿಂದ ಹೊರ ಹೋಗಿ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೊಪ್ಪಳದಲ್ಲಿ ನಡೆದ ಘಟನೆ: ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಕಾರಣ ಯುವಕನೊಬ್ಬ ಅಪ್ರಾಪ್ತೆಯ ಮನೆಗೆ ತೆರಳಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಬಳಿಕ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಜನವರಿ 14 ರಂದು ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ನಡೆದಿತ್ತು. ಇಬ್ಬರ ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಕೋಪಗೊಂಡ ಯುವಕ ಬಾಲಕಿಗೆ ಇರಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಮದುವೆ ಮುರಿದುದಕ್ಕೆ ಯುವಕ ಆತ್ಮಹತ್ಯೆ: ನಿಶ್ಚಯವಾಗಿದ್ದ ಮದುವೆ ಮುರಿದು ಬಿತ್ತು ಎಂದು ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಕೋಟೆ ಗ್ರಾಮದಲ್ಲಿ ಕೆಲದಿನಗಳ ಹಿಂದೆ ನಡೆದಿತ್ತು. ಆಯನೂರು ಕೋಟೆ ಗ್ರಾಮದ ಸ್ವಾಮಿನಾಥ ಎಂಬ ಯುವಕಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಕಾರಣಾಂತರಗಳಿಂದ ವಿವಾಹ ಮುರಿದು ಬಿದ್ದಿತ್ತು. ಇದರಿಂದ ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಬಳ್ಳಾರಿ : ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆ.. 16 ತಿಂಗಳ ಮಗು ಅನಾಥ