ಗುಂಡ್ಲುಪೇಟೆ: ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ತಾಲೂಕು ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ಡಾ.ಬಾಬು ಜಗಜೀವನ ರಾಮ್ ಯುವ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಮಾದಿಗ ಸಂಘಟನೆಯ ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾದಿಗ ಸಮುದಾಯದ ಮುಖಂಡ ಹಾಗೂ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸೋಮಶೇಖರ್ ಟಿ.ರಂಗಸ್ವಾಮಿ ಮಾತನಾಡಿ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಧ್ಯಯನ ಮಾಡಿರುವ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಯ ಶೋಷಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ರಾಜ್ಯದ ಮಾದಿಗ ಸಮುದಾಯವು ಸ್ವಾಗತಿಸುತ್ತದೆ. ಆದರೆ ಮಾದಿಗ ಸಮುದಾಯ ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕವಾಗಿವಾಗಿ ತೀರಾ ಹಿಂದುಳಿದಿದ್ದು, ಸಮುದಾಯದವರು ಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
25 ವರ್ಷಗಳಿಂದ ಮೀಸಲಾತಿಗಾಗಿ ಮಾದಿಗ ಸಮುದಾಯವು ಹೋರಾಟ ಮಾಡುತ್ತ ಬಂದಿದೆ. ಜನಾಂಗದ ಮೇಲೆ ಈಗಲೂ ಕೊಲೆ, ದೌರ್ಜನ್ಯ ಮುಂತಾದ ಶೋಷಣೆಗಳು ನಡೆಯುತ್ತಿವೆ. ಇದರಿಂದ ಇಡೀ ಮಾದಿಗ ಸಮುದಾಯವು ದುರ್ಬಲಗೊಂಡಿದೆ. ಸಂವಿಧಾನ ಬದ್ಧವಾದ ಹಕ್ಕುಗಳು ತುಳಿತಕ್ಕೆ ಒಳಗಾದ ಎಲ್ಲಾ ಶೋಷಿತ ಸಮುದಾಯಗಳಿಗೆ ಸಿಗಬೇಕು ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಬೇಕು. ತಮಿಳುನಾಡು, ಪಂಜಾಬ್, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮೀಸಲಾತಿ ವರ್ಗೀಕರಣ ಆಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜನಾಂಗ ಮುಖಂಡರಾದ ಟಿ. ಶಂಕರ್ , ನರಸಿಂಹ, ನಿಟ್ರೆ ಮಹದೇವ, ಸೋಮಶೇಖರ್, ಲೋಕೇಶ್, ವಕೀಲರಾದ ರಾಜೇಶ್, ಗಂಗಾಧರ , ಮಹೇಶ್, ಸಿದ್ದಯ್ಯ ಸೇರಿದಂತೆ ಇತರರು ಹಾಜರಿದ್ದರು.