ಚಾಮರಾಜನಗರ: ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟಕಗಳಿಂದ 30ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದಲ್ಲಿ ನಡೆಯುತ್ತಿರುವ ಬಿಳಿಕಲ್ಲು ಗಣಿಗಾರಿಕೆಯಲ್ಲಿ ಮಿತಿಮೀರಿ ಸ್ಫೋಟಕ ಬಳಸುವ ಕಾರಣ ಭಾರಿ ಶಬ್ದ ಉಂಟಾಗಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿ ಶೇಖರಿಸಿಟ್ಟ ಕುಡಿಯುವ ನೀರು ಕಲುಷಿತವಾಗುತ್ತಿದೆ. ರಾತ್ರಿ ವೇಳೆ ಸ್ಫೋಟ ಹೆಚ್ಚಾಗುವುದರಿಂದ ಮಕ್ಕಳು ನಿದ್ರೆ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡರು.
ಈ ಹಿಂದೆ 300 ಅಡಿ ಭೂಮಿ ಕೊರೆದರೆ ನೀರು ಬರುತ್ತಿತ್ತು. ಆದರೆ ಗಣಿಗಾರಿಕೆಯಿಂದ 600-700 ಅಡಿ ತೆಗೆಸಿದರೂ ಸಹ ನೀರು ಸಿಗುತ್ತಿಲ್ಲ. ಅಂತರ್ಜಲ ಪ್ರಮಾಣ ಸಂಪೂರ್ಣ ಕುಸಿದಿದೆ. ಕಲ್ಲು ತುಂಬಿದ ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗಿದೆ. ಗ್ರಾಮದ ಜಾನುವಾರುಗಳನ್ನು ಮೇಯಿಸುವ ಸರ್ವೇ ನಂ. 192ರ ಗೋಮಾಳದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಜಾನುವಾರುಗಳನ್ನು ಮೇಯಿಸಲು ಸ್ಥಳಾವಕಾಶ ಇಲ್ಲದಂತಾಗಿದೆ ಅನ್ನೋದು ಗ್ರಾಮಸ್ಥರ ದೂರು.
ಇದನ್ನೂ ಓದಿ: ಸೋನು ಸೂದ್ ನೆರವು: ಮಂಗಳೂರಿನ ಉಳ್ಳಾಲದಲ್ಲಿ ಸ್ಥಾಪನೆಯಾಗಲಿದೆ ಆಮ್ಲಜನಕ ಘಟಕ
ಸೋಮವಾರದಂದು ಗ್ರಾಮಸ್ಥರು ಮಲ್ಲಯ್ಯನಪುರ ರಸ್ತೆಯಲ್ಲಿ ಜಮಾವಣೆಗೊಂಡು ಮಡಹಳ್ಳಿ ಗುಮ್ಮಕಲ್ಲು ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಮತ್ತು ತಾಲೂಕು ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.