ಚಾಮರಾಜನಗರ: ಡಿಸ್ಕವರಿ ಚಾನೆಲ್ಲಿನ ಟಿವಿ ಶೋ 'ಮ್ಯಾನ್ ವರ್ಸಸ್ ವೈಲ್ಡ್' ನ ವಿಶೇಷ ಸಂಚಿಕೆಯ ಚಿತ್ರೀಕರಣಕ್ಕಾಗಿ ಬಂಡೀಪುರಕ್ಕೆ ಆಗಮಿಸಿದ್ದ ಸೂಪರ್ ಸ್ಟಾರ್ ರಜಿನಿ ಹಾಗೂ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ರಸ್ತೆ ಮಾರ್ಗವನ್ನು ಬಳಸಿ ಅಭಿಮಾನಿಗಳಿಂದ ಅಂತರ ಕಾಯ್ದುಕೊಂಡರೂ ಜನರು ಬೇರ್ ಗ್ರಿಲ್‌ನೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.
ಕಳೆದ ಮೂರು ದಿನಗಳ ಹಿಂದೆ ವಿಶೇಷ ಸಂಚಿಕೆಯ ಚಿತ್ರೀಕರಣಕ್ಕಾಗಿ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಬೇರ್ ಗ್ರಿಲ್ಸ್ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಬೇರ್ ಬೆನ್ನತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಅಕ್ಷಯ್ ಕುಮಾರ್ 15ಕ್ಕೂ ಹೆಚ್ಚು ಬೌನ್ಸರ್ ಗಳ ಭದ್ರತೆಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಿಂದ ಗಣ್ಯ ವ್ಯಕ್ತಿಗಳು ಮಾತ್ರ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಪಡೆದರು. ಆದರೆ, ಬೇರ್ ಗ್ರಿಲ್ಸ್ ಮಾತ್ರ ಕಿಟಕಿ ಇಳಿಸಿಕೊಂಡು ಜನರತ್ತ ಕೈ ಬೀಸುತ್ತಾ, ಸೆಲ್ಫಿಗೆ ಬಂದ ಜನರಿಗೆ ನಗೆ ಬೀರುತ್ತಾ ಎಲ್ಲರಿಗೆ ಶೇಕ್ ಹ್ಯಾಂಡ್ ಮಾಡುತ್ತಾ ಆತ್ಮೀಯವಾಗಿ ಬೆರೆತರು.
ಇನ್ನು, ಕಳೆದ ರಾತ್ರಿ ಬೇರ್ ಗ್ರಿಲ್ಸ್ ಖಾಸಗಿ ರೆಸಾರ್ಟ್ ನಲ್ಲಿ ಭದ್ರತಾ ಸಿಬ್ಬಂದಿಗಳೊಂದಿಗೆ ಊಟ ಸೇವಿಸಿ ಎಲ್ಲರ ಮನಸ್ಸನ್ನೂ ಕೂಡಾ ಗೆದ್ದರು.