ಚಾಮರಾಜನಗರ : ತೀವ್ರ ವಿರೋಧದ ನಡುವೆಯೂ SSLC ಪರೀಕ್ಷೆ ಅಚ್ಚುಕಟ್ಟಾಗಿ ಮುಗಿದಿದೆ. ಇದರ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜಿಲ್ಲೆಯ ವಿದ್ಯಾರ್ಥಿನಿಗೆ ಕರೆ ಮಾಡಿ ಪರೀಕ್ಷೆಯ ಅನುಭವ, ಇಲಾಖೆ ಮಾಡಿದ್ದ ವ್ಯವಸ್ಥೆ ಕುರಿತು ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.
ನಗರದ ಧೀನಬಂಧು ಕನ್ನಡ ಮಾಧ್ಯಮ ಶಾಲೆಯ ಗೌರಿ ಎಂಬ ವಿದ್ಯಾರ್ಥಿನಿಗೆ ಕರೆ ಮಾಡಿದ್ದ ಸಚಿವರು, ಪರೀಕ್ಷೆ ಹೇಗೆ ಬರೆದಿದ್ದೀಯಾ, ಮನಸ್ಸಿನ ಭಾರ ಈಗ ಇಳಿಯಿತಾ? ವಿಶೇಷ ಅಡುಗೆ ಏನಾದರೂ ಮಾಡಿಸಿಕೊಂಡಿದ್ದೀಯಾ ಎಂದು ಆಪ್ತವಾಗಿ ಮಾತನಾಡುವ ಜೊತೆಗೆ ನಮ್ಮ ಮನೆಯಲ್ಲಿ ಪಾಯಸ ಮಾಡಿದ್ದೇವೆ ಫೋನಿನಲ್ಲೇ ಕಳುಹಿಸಲಾ ಎಂದು ನಗೆ ಚಟಾಕಿಯನ್ನೂ ಹಾರಿಸಿದ್ದಾರೆ.
ಅಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಬರಲಿದೆ. ನೀನು ನನಗೆ ಕರೆ ಮಾಡಬೇಕು. ಎರಡ್ಮೂರು ದಿನ ಏನನ್ನೂ ಯೋಚಿಸದೆ ಆರಾಮವಾಗಿ ನಿದ್ರೆ ಮಾಡು. ಪರೀಕ್ಷೆ ವೇಳೆಯಲ್ಲಿ ಕಲಿತ ಸಾಮಾಜಿಕ ಅಂತರ, ಕೈ ಸ್ವಚ್ಛವಾಟ್ಟುಕೊಳ್ಳುವುದನ್ನು ಹಾಗೇ ಮುಂದುವರೆಸಬೇಕು ಎಂದು ಸಲಹೆ ನೀಡಿದ್ದಾರೆ. ಬಳಿಕ ಗೌರಿ ತಂದೆ ಪತ್ರಕರ್ತ ಬನಶಂಕರ ಆರಾಧ್ಯ ಅವರೊಂದಿಗೆ ಮಾತನಾಡಿ, ಮೊದಲ ದಿನವೇ ಆತಂಕ ದೂರವಾಯಿತು. ಶಕ್ತಿಮೀರಿ ಅಚ್ಚುಕಟ್ಟಾಗಿ ಪರೀಕ್ಷೆ ಮುಗಿಸಿದ್ದೇವೆ.
ಬೇರೆ ರಾಜ್ಯಗಳು ಕೂಡ ನಮ್ಮನ್ಮು ಫಾಲೋ ಮಾಡಬಹುದಾಗಿದೆ. ನಿಮ್ಮ ಮಗಳನ್ನು ನಮ್ಮ ಮಗಳಂತೆ ನೋಡಿಕೊಂಡಿದ್ದೇವೆ ಎಂದು ಪಾಲಕರಿಗೂ ವಿಶ್ವಾಸ ತುಂಬಿದ್ದಾರೆ. ಗೌರಿ ಬರೆದ ಬಾಲರಪಟ್ಟಣ ಪರೀಕ್ಷಾ ಕೇಂದ್ರದ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದ ಬಗೆ ಹೀಗೆ ಪ್ರತಿಯೊಂದು ಅಚ್ಚುಕಟ್ಟಾಗಿರೋದನ್ನ ಕಂಡು ಪಾಲಕರು ಕೂಡ ಶಿಕ್ಷಣ ಸಚಿವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.