ಚಾಮರಾಜನಗರ : ವಾರಾಂತ್ಯ ಹಾಗೂ ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಚಾಮರಾಜನಗರದ ಬಹುತೇಕ ಎಲ್ಲಾ ರೆಸಾರ್ಟ್ ಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿಹೋಗಿವೆ.
ಚಾಮರಾಜನಗರ ತಾಲೂಕಿನ ಕೆ.ಗುಡಿ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಇದರಿಂದಾಗಿ ಸ್ಥಳೀಯ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಬಂಡೀಪುರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ.
ಇಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕೇರಳ, ತಮಿಳುನಾಡು, ಬೆಂಗಳೂರು, ಮೈಸೂರು ಸೇರಿದಂತೆ ವಿವಿದೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೇವರಿಗೆ ಪೂಜೆ ಸಲ್ಲಿಸುವ ಜೊತೆಗೆ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಪೃಕೃತಿಯ ರಮಣೀಯ ದೃಶ್ಯಗಳು ಪ್ರವಾಸಿಗರ ಮನವನ್ನು ತಣಿಸುತ್ತಿದೆ.
ಇದನ್ನೂ ಓದಿ : ಈ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆ ಇಲ್ಲ: ಕಾರಣ ಕೇಳಿದರೆ ಅಚ್ಚರಿಯಾಗುತ್ತೆ!
ಜೊತೆಗೆ ಬಂಡೀಪುರ ಸಫಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಪ್ರವಾಸಿಗರ ಸಫಾರಿಗಾಗಿ 8 ಬಸ್, 5 ಜಿಪ್ಸಿ, ಮತ್ತು ಒಂದು ಕ್ಯಾಂಟರ್ ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸಫಾರಿ ವೇಳೆ ಕಾಡಾನೆ, ಕೋಣ, ಜಿಂಕೆ, ನವಿಲು, ಕರಡಿ ಸೇರಿದಂತೆ ಇನ್ನಿತರ ಹಲವು ಕಾಡು ಪ್ರಾಣಿಗಳು ಕಂಡು ಪ್ರವಾಸಿಗರು ಸಂತೋಷಪಟ್ಟರು. ಇದೇ ವೇಳೆ ಸಫಾರಿಗೆ ಆಗಮಿಸಿದ್ದ ಪ್ರವಾಸಿಗರಿಗೆ ಟಿಕೆಟ್ ಸಿಗದೆ ನಿರಾಸೆಯಿಂದ ವಾಪಸಾಗಿದ್ದಾರೆ.
ಚಾಮರಾಜನಗರ, ಗುಂಡ್ಲುಪೇಟೆ ವ್ಯಾಪ್ತಿಯ ಜಂಗಲ್ ಲಾಡ್ಜ್, ಸರಾಯಿ, ಕಂಟ್ರಿ ಕ್ಲಬ್ ಸೇರಿದಂತೆ ಹಲವು ಖಾಸಗಿ ರೆಸಾರ್ಟ್‍ಗಳಲ್ಲಿ ಪ್ರವಾಸಿಗರಲ್ಲಿ ತುಂಬಿ ತುಳುಕುತ್ತಿದ್ದಾರೆ. ಜೊತೆಗೆ ಗುಂಡ್ಲುಪೇಟೆ ಪಟ್ಟಣದ ಬಹುತೇಕ ಹೋಟೆಲ್, ಲಾಡ್ಜ್ ಗಳಲ್ಲೂ ಜನರು ವಾಸ್ತವ್ಯ ಹೂಡಿ, ರಜೆಯ ಮಜಾ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ : ಮೆರಿ ಕ್ರಿಸ್ಮಸ್! ಇಂದು ಯೇಸುಕ್ರಿಸ್ತನ ಜನ್ಮದಿನ: ನಾಡಿನೆಲ್ಲೆಡೆ ಕ್ರಿಸ್ಮಸ್ ಖುಷಿ!