ಚಾಮರಾಜನಗರ: ನಗರಸಭೆ ಕಾಯಂ ಪೌರಕಾರ್ಮಿಕರ ನೇರ ನೇಮಕಾತಿಯಲ್ಲಿ ಹಿರಿತನ, ಜೇಷ್ಠತೆ, ಸೇವಾನುಭವ ಕಡೆಗಣಿಸಿ ತಮಗಿಷ್ಟ ಬಂದವರನ್ನು ನೇಮಕ ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಕೈಚಳಕ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಾಮರಾಜನಗರ ನಗರಸಭೆಯಲ್ಲಿ ಖಾಲಿ ಇರುವ 18 ಪೌರಕಾರ್ಮಿಕ ಹುದ್ದೆಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶವು ನಡೆಸಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದ್ದು, ಈ ಕುರಿತು ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಹಾಗೂ ಆಯ್ಕೆ ಸಮಿತಿಯ 9 ಮಂದಿ ಸದಸ್ಯರಿಗೂ ಆಕ್ಷೇಪಣೆ ಸಲ್ಲಿಸಿದ್ದ ನಡುವೆಯೂ 10 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ.
ನಗರಸಭೆಯಲ್ಲಿ ಹಾಲಿ ಕೆಲಸ ಮಾಡುತ್ತಿರುವ ಗುತ್ತಿಗೆ, ಹೊರಗುತ್ತಿಗೆ ಹಾಗೂ ದಿನಗೂಲಿ ಹಿರಿಯ ಪೌರಕಾರ್ಮಿಕರಿಗೆ ಆದ್ಯತೆ ನೀಡದೇ ಒಂದು ದಿನವೂ ಪೌರಕಾರ್ಮಿಕರಾಗಿ ಕೆಲಸ ಮಾಡದ ಆಟೋ ಚಾಲಕನಿಗೆ ದಾಖಲೆ ಸೃಷ್ಟಿಸಿ ಹುದ್ದೆಗೆ ಪರಿಗಣಿಸಿರುವುದು, 45 ವರ್ಷ ಮೇಲ್ಪಟ್ಟವರ ನೇಮಕ, ತಾತ್ಕಾಲಿಕ ಪಟ್ಟಿಯಲ್ಲಿರುವವರ ಜನ್ಮ ದಿನಾಂಕ ತಿದ್ದಿರುವ ಅಂಶಗಳನ್ನು ಉಲ್ಲೇಖಿಸಿ ಆಕ್ಷೇಪ ಸಲ್ಲಿಸಿದ್ದರೂ ನೇಮಕಾತಿ ಆದೇಶ ನೀಡಿದ್ದಾರೆ ಎಂದು ನೇಮಕಾತಿ ವಂಚಿತ ಪೌರಕಾರ್ಮಿಕ ಆರ್.ನಾಗರಾಜು ದೂರಿದ್ದಾರೆ.
2002ರಿಂದ ಕೆಲಸ ಮಾಡುತ್ತಿದ್ದ ಗುತ್ತಿಗೆ ಆಧಾರಿತ ಪೌರಕಾರ್ಮಿಕರು ತಮ್ಮ ದಾಖಲಾತಿಯನ್ನು(ಹಾಜರಾತಿ, ಸಂಬಳ ವಿವರ, ಪಿಎಫ್, ಹೊರಗುತ್ತಿಗೆ ಏಜೆನ್ಸಿಗೆ ನೀಡಲಾದ ಕಾರ್ಯಾದೇಶ) ನೀಡುವಂತೆ ಮಾಹಿತಿ ಹಕ್ಕಿನಡಿ ಮನವಿ ಸಲ್ಲಿಸಿದ್ದರೂ ನಗರಸಭೆಯ ಪೌರಾಯುಕ್ತರು ಸಂಬಂಧಿಸಿದ ದಾಖಲೆಯನ್ನೇ ಉದ್ದೇಶಪೂರ್ವಕವಾಗಿ ನೀಡಲಿಲ್ಲ. ಇದರಿಂದ 10ಕ್ಕೂ ಹೆಚ್ಚು ಪೌರಕಾರ್ಮಿಕರು 17 ವರ್ಷ ಸೇವಾನುಭವವಿದ್ದರೂ ಕಾಯಂ ಹುದ್ದೆಯಿಂದ ವಂಚಿತರಾಗುವಂತಾಯಿತು ಅವರು ಅಳಲು ತೋಡಿಕೊಂಡಿದ್ದಾರೆ.
ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನೌಕರರ ಜನ್ಮ ದಿನಾಂಕ ಒಂದು ಬಗೆಯಾದರೆ, ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಲ್ಲಿ ಮತ್ತೊಂದು ರೀತಿಯ ಜನ್ಮ ದಿನಾಂಕವನ್ನು ನಮೂದಿಸಿರುವುದು ಬೆಳಕಿಗೆ ಬಂದಿದೆ. ಆಯ್ಕೆ ಪಟ್ಟಿಯಲ್ಲಿನ ಮೂವರು ಕಾರ್ಮಿಕರ ಜನ್ಮದಿನ, ತಿಂಗಳು ಒಂದೇ ಇದ್ದು, ಇಸವಿಗಳು ಮಾತ್ರ ಬದಲಾಗಿವೆ. ಉದ್ದೇಶಪೂರ್ವಕವಾಗಿ ಜನ್ಮ ದಿನಾಂಕವನ್ನು ತಿದ್ದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಚಾಮರಾಜನಗರ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶರವಣ ವಿರುದ್ಧ ನಾಗರಾಜ್ ನೇರ ಆರೋಪ ಮಾಡುತ್ತಿದ್ದಾರೆ. 13 ವರ್ಷಗಳಿಂದ ನಗರದ ಸ್ವಚ್ಛತೆ ಹಾಗೂ ಗುತ್ತಿಗೆ, ಹೊರಗುತ್ತಿಗೆ ಪೌರಕಾರ್ಮಿಕರ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಶರವಣ 2002ರಿಂದ ನಗರಸಭೆಯಲ್ಲಿ ಕೆಲಸ ಮಾಡಿದ ನಮಗೆ ದಾಖಲೆಗಳನ್ನೇ ನೀಡಲಿಲ್ಲ. ಅವರು ಹಾಜರಾತಿ ದಾಖಲೆ ನೀಡಿದ್ದರೆ ನಾವು ಉದ್ಯೋಗದಿಂದ ವಂಚಿರಾಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ನೇಮಕಾತಿಯಲ್ಲಿನ ಅವ್ಯವಹಾರವನ್ನು ಪ್ರಶ್ನಿಸಿ ಆರ್‌ಟಿಐನಡಿ ಮಾಹಿತಿ ಕೇಳಿದ ಹಿರಿಯ ಪೌರಕಾರ್ಮಿಕ ಆರ್.ನಾಗರಾಜು ಅವರನ್ನು ಕೆಲಸದಿಂದ ವಜಾಗೊಳಿಸಿದ್ದ ನಗರಸಭೆ, ಜಿಲ್ಲಾಧಿಕಾರಿಯವರ ಮಧ್ಯಸ್ಥಿಕೆಯ ನಂತರ ಮತ್ತೆ ಪೌರಕಾರ್ಮಿಕನನ್ನು ಕೆಲಸಕ್ಕೆ ತೆಗೆದುಕೊಂಡಿದೆಯಂತೆ.
ಇನ್ನು ಅರ್ಹರನ್ನು ಕಡೆಗಣಿಸಿ ಮಾಡಿರುವ ಈ ನೇಮಕಾತಿ ಬಗ್ಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸೂಕ್ತ ತನಿಖೆ ನಡೆಸಿ ನೊಂದ 13 ಕುಟುಂಬಗಳಿಗೆ ನ್ಯಾಯ ಒದಗಿಸಬೇಕಿದೆ.