ಕೊಳ್ಳೇಗಾಲ : ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗದಲ್ಲಿ ದಾಖಲಾಗಿರುವ ಪ್ರಕರಣವನ್ನು ಪಕ್ಷ ಖಂಡಿಸುತ್ತದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರ್ನಾಟಕದ ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ನಡೆದ ರೈತ ಸಮಾವೇಶಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಭೇಟಿ ನೀಡಿದ್ದರು.
ಈ ವೇಳೆ ಹಠಮಾರಿ ಬಿಜೆಪಿ ಸರ್ಕಾರದ ವಿರುದ್ಧ ದೆಹಲಿ ಮಾದರಿ ನೀವು ಹೋರಾಟ ಮಾಡಬೇಕು, ಸಾವಿರರು ರೈತರು ಟ್ರ್ಯಾಕ್ಟರ್ ಬಳಸಿ ಬೆಂಗಳೂರು ಮುತ್ತಿಗೆ ಹಾಕಬೇಕು ಎಂದು ಒಬ್ಬ ರೈತ ನಾಯಕನಾಗಿ ರಾಕೇಶ್ ಟಿಕಾಯತ್ ಸಹಜವಾಗಿ ರೈತರಿಗೆ ಕರೆ ನೀಡಿದ್ದರು.
ಆದರೆ, ಈ ಹೇಳಿಕೆ ಪ್ರಚೋದನಾಕಾರಿ ಭಾಷಣ ಎಂದು ರಾಕೇಶ್ ಟಿಕಾಯತ್ ವಿರುದ್ಧ ಸ್ವತಃ ಪೊಲೀಸರು ಸುಮೋಟೊ ಕೇಸ್ ಹಾಕಿಕೊಂಡಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುನ್ನಾರವಾಗಿದೆ. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಬಿಜೆಪಿಯ ನಾಯಕರ ಮೇಲೆ ದೂರು ದಾಖಲಿಸಿ : ಬಿಜೆಪಿಯ ಅನಂತ್ ಕುಮಾರ್ ಹೆಗ್ಡೆ, ಸಿ ಟಿ ರವಿ, ಶೋಭಾ ಕರಂದ್ಲಾಜೆ, ಕಟೀಲ್, ರೇಣುಕಾಚಾರ್ಯ, ಬಸವರಾಜ ಪಾಟೀಲ್ ಯತ್ನಾಳ್ ಇವರೆಲ್ಲರೂ ಕೂಡ ಒಂದಲ್ಲ ಒಂದು ರೀತಿ ಹಿಂದೂ ಹೆಸರಲ್ಲಿ ಮುಸಲ್ಮಾನರ ವಿರುದ್ಧ ಜನರನ್ನು ಉದ್ರೇಕಗೊಳಿಸುವ ಅನೇಕ ಹೇಳಿಕೆ ನೀಡಿದ್ದಾರೆ. ಈ ಆಧಾರದ ಮೇಲೆ ದೂರು ದಾಖಲಿಸಿ ಎಂದು ಒತ್ತಾಯಿಸಿದರು.