ಚಾಮರಾಜನಗರ : ಚುಮುಚುಮು ಚಳಿ, ಮೋಡ ಮುಸುಕಿದ ವಾತಾವರಣದಿಂದಾಗಿ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟವೀಗ ಮಂಜಿನಗಿರಿಯಾಗಿ ಪರಿವರ್ತನೆಯಾಗಿದೆ. ಈ ಕೂಲ್ ವಾತಾವರಣದ ಸೌಂದರ್ಯ ಸವಿಯಲು ಪ್ರವಾಸಿಗರು ಬರುತ್ತಿದ್ದಾರೆ.
ಪೂರ್ವ ಮತ್ತು ಪಶ್ವಿಮ ಘಟ್ಟಗಳು ಸಂಧಿಸುವ ಬಿಳಿಗಿರಿರಂಗನಬೆಟ್ಟ ವನ್ಯಧಾಮದಲ್ಲಿ ಕಳೆದ ಒಂದು ತಿಂಗಳಿಂದ ಮಂಜಿನ ವಾತಾವರಣವಿದೆ. ಕಳೆದ ಎರಡ್ಮೂರು ದಿನಗಳಿಂದ ಚಳಿಗಾಳಿ ತುಸು ಹೆಚ್ಚೇ ಆಗಿದೆ. ಪ್ರವಾಸಿಗರಿಗೆ ಈ ತಂಪಾದ ವಾತಾವರಣ ಹಿತ ನೀಡುತ್ತಿದೆ.
ಕಳೆದ ಹಲವು ತಿಂಗಳಿನಿಂದ ಮಳೆಯಾಗದೇ ಬರ ಕಾಣಿಸಿತ್ತು. ಬೆಟ್ಟದೊಳಗಿರುವ ಕೆರೆಗಳೆಲ್ಲಾ ಬತ್ತಿ ಹೋಗಿದ್ದವು. ವನ್ಯಜೀವಿಗಳು ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವ ಸ್ಥಿತಿ ಇತ್ತು. ಆದರೆ, ಕಳೆದ ತಿಂಗಳು ಜೋರು ಮಳೆಯಾದ ಪರಿಣಾಮ ಬೆಟ್ಟದ ಸುತ್ತಮುತ್ತಲೂ ಸದ್ಯಕ್ಕೆ ನೀರಿನ ಕೊರತೆಯಿಲ್ಲ. ಇದೀಗ ಚಳಿಯೂ ಜೋರಾಗಿದೆ.
ಬಿಳಿಗಿರಿರಂಗನಬೆಟ್ಟದಲ್ಲಿ ಚಳಿಗಾಲದ ಮಂಜಿನ ಸೌಂದರ್ಯ ಸವಿಯಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶನಿವಾರ, ಭಾನುವಾರ ಸೇರಿದಂತೆ ಇತರೆ ವಿಶೇಷ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.
ಸಾವಿರಾರು ಸಸ್ಯ ಪ್ರಬೇಧಗಳ ಬಿಳಿಗಿರಿರಂಗನಬೆಟ್ಟ, ಕೆ.ಗುಡಿ, ನಲ್ಲಿಕತ್ತರಿ, ಕೆರೆದಿಂಬ, ಜೋಡಿಗೆರೆ, ಹೊನ್ನಮೇಟಿ, ಅತ್ತಿಖಾನೆ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ 11ಗಂಟೆವರೆಗೂ ಮಂಜಿನ ವಾತಾವರಣ ಇರುತ್ತದೆ. ಸಂಜೆ ವೇಳೆಯಲ್ಲೂ ಮತ್ತೆ ಮಂಜು ಆವರಿಸಿ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ಕಷ್ಟ ಪಡುವವರಿಗೆ ಹೊದಿಕೆಗಳನ್ನ ಕೊಡ್ತಿರುವ ವಿದ್ಯಾರ್ಥಿಗಳು..
ಬೆಟ್ಟದ ಕೆ.ಗುಡಿ, ನವಿಲುಗೆರೆ, ಸೋಮೇಶ್ವರ ಕೆರೆ, ಪುರಾಣಿ, ಚೇನ್ ಗೇಟ್‍ನ ಸಮೀಪದ ಕೆರೆ, ಹೊಸಹಳ್ಳಿ ಕೆರೆ (ಕೃಷ್ಣಯ್ಯನ ಕಟ್ಟೆ)ಗಳ ಬಳಿ ವನ್ಯಜೀವಿಗಳು ಕಾಣಸಿಗುತ್ತವೆ. ಆನೆಗಳು ಗುಂಪು ಗುಂಪಾಗಿ ಕಾಣಸಿಗುತ್ತವೆ. ಜೊತೆಗೆ ಕಾಡೆಮ್ಮೆ, ಕಡವೆ, ಜಿಂಕೆ, ಕಾಡುನಾಯಿ ಸೇರಿದಂತೆ ಇತರೆ ವನ್ಯಪ್ರಾಣಿಗಳು ಹಿಂಡು ಹಿಂಡಾಗಿ ರಸ್ತೆ ಬದಿಗಳಲ್ಲಿ ಕೆರೆ ಬಳಿ ವಿಹರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.