ಚಾಮರಾಜನಗರ: 'ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯ..' ಎಂಬ ನೀಲಗಾರರ ಕಂಠಕ್ಕೆ ಜೊತೆಯಾಗಿ ಭಜನೆ ಮಾಡುತ್ತಾ ಇಲ್ಲಿನ ಸಿಡಿಎಸ್ ಭವನದಲ್ಲಿ ನಗರಸಭೆ ಸಿಬ್ಬಂದಿ ನಿರಾಶ್ರಿತರನ್ನು ರಂಜಿಸಿದರು.
ಲಾಕ್‌ಡೌನ್ ವೇಳೆ ವಸತಿ, ಊಟ ಇಲ್ಲದೇ ಅಲೆದಾಡುತ್ತಿದ್ದ 15 ಮಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಇಲ್ಲಿನ ಸಿಡಿಎಸ್ ಭವನದಲ್ಲಿ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ. ಈ ನಿರಾಶ್ರಿತರಿಗೆ ಮನರಂಜನೆ ನೀಡುವ ಸಲುವಾಗಿ ನೀಲಗಾರರ ಪದಗಳ ಮೂಲಕ ಎರಡೂವರೆ ತಾಸು ಕಲಾವಿದರ ಜೊತೆಗೂಡಿ ನಗರಸಭೆ ಸಿಬ್ಬಂದಿ ಭಜನೆ ಮಾಡಿದರು. ಆರಂಭದಲ್ಲಿ ಕಲಾವಿದರು ಭಜನೆ ಮಾಡಿದ್ದು ಬಳಿಕ ಸಂಗೀತ ಸಲಕರಣೆ ಹಿಡಿದು ಹಾಡಿದರು. ಈ ವೇಳೆ ನಿರಾಶ್ರಿತರು ಚಪ್ಪಾಳೆ ಸೇರಿಸುತ್ತಾ ನೀಲಗಾರರ ಪದಕ್ಕೆ ತಲೆದೂಗಿದರು.