ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದುಕೆರೆ ವಲಯದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಹುಲಿಯೊಂದು ಐದು ಜಾನುವಾರುಗಳನ್ನು ಬಲಿ ಪಡೆದಿದೆ.
ಈ ಹುಲಿಯನ್ನು ಸೆರೆ ಹಿಡಿಯಲು ರೈತರು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದು, ಇಲಾಖೆಯು ಹುಲಿಯ ಚಲನವಲನಗಳನ್ನು ಗಮನಿಸಿ 40 ಕ್ಯಾಮರಾಗಳನ್ನು ಅಳವಡಿಸಿದೆ. ಅಳವಡಿಸಿರುವ ಕ್ಯಾಮರಾದಲ್ಲಿ ಹುಲಿ ಸಂಚಾರ ಮಾಡುತ್ತಿರುವುದು ಸೆರೆಯಾಗಿದೆ. ಆದರೆ ಬೋನಿನ ಹತ್ತಿರ ಬಂದಿಲ್ಲ. ಭಾನುವಾರ ಇಲಾಖೆಯ ಆನೆಗಳನ್ನು ಬಳಸಿಕೊಂಡು ಹುಲಿ ಸೆರೆಗೆ ಸಿಬ್ಬಂದಿ ಹರಸಹಾಸ ಪಟ್ಟರೂ ಹುಲಿ ಪತ್ತೆಯಾಗಿಲ್ಲ.
ಕಾಡಂಚಿನ ಪ್ರದೇಶದಲ್ಲಿರುವ ಜಮೀನುಗಳು ಪಾಳು ಬಿದ್ದಿದ್ದು, ಕಾಡಿನಂತೆ ಬೆಳೆದು ನಿಂತಿದೆ. ಹುಲಿ ಸರಹದ್ದು ಸಹ ಹೆಚ್ಚಾಗುತ್ತಿರುವ ಕಾರಣ ಕಾಡಂಚಿನ ಪ್ರದೇಶದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಲೇ ಇದೆ. ಕಾಡಂಚಿಗೆ ಜಾನುವಾರುಗಳನ್ನು ಬಿಡದಂತೆ ಜನರಿಗೆ ಎಚ್ಚರಿಕೆ ನೀಡಿದರೂ ಸಹ ಪ್ರಯೋಜನವಾಗುತ್ತಿಲ್ಲ ಎಂದು ವಲಯಾರಣ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆ ಹಿಡಿದು ಕಾಡಿಗೆ ಬೀಡಬೇಕು. ಜಾನುವಾರು ಸಿಗದೆ ಹೋದರೆ ಜನರ ಮೇಲೆ ದಾಳಿ ಮಾಡಿದರೆ ಯಾರು ಹೊಣೆ ಎಂದು ರೈತ ಮಹಾದೇವಪ್ಪ ಪ್ರಶ್ನಿಸಿದರು. ಆರು ತಿಂಗಳ ಹಿಂದೆ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಹುಲಿಯೊಂದು ಇಬ್ಬರು ರೈತರನ್ನು ಬಲಿ ಪಡೆದಿತ್ತು. ಬಳಿಕ ಅದನ್ನು ಸೆರೆ ಹಿಡಿಯಲಾಗಿತ್ತು.