ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಜಾಗೇರಿಯ ಸಮೀಪವಿರುವ ರಾಶಿಬೋಳನಗುಡ್ಡಕ್ಕೆ ಬೆಂಕಿ ತಗುಲಿರುವ ಘಟನೆ ನಡೆದಿದ್ದು, ಹತ್ತಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ಕುರುಚಲು ಗಿಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದ ಪರಿಣಾಮ ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸುಟ್ಟು ಹೋಗಿದೆ. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದು. ವಿಷಯ ತಿಳಿದ ಅರಣ್ಯ ಇಲಾಖೆಯವರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಡಿಸಿಎಫ್ ಏಡುಕೊಂಡಲು ಮಾರ್ಗದರ್ಶನದಂತೆ ಆರ್ಎಫ್ಓ ಪ್ರವೀಣ್ ರಾಮಪ್ಪ ಛಲವಾದಿ ನೇತೃತ್ವದ 30 ಸಿಬ್ಬಂದಿ ಫೈಯರ್ ಬ್ಲೋವರ್ ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯದಲ್ಲಿ ಬೆಂಕಿ ಹಾಕಿದ್ದ ಕಿಡಿಗೇಡಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಡಿಸಿಎಫ್ ಏಡುಕೊಂಡಲು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.