ಬೆಂಗಳೂರು: ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಇಂದು ಎಲ್ಲಾ ರಾಮ ಮಂದಿರಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದಿತು.
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಗರದ ವಿವಿಧ ರಾಮ ಮಂದಿರದಲ್ಲಿ ಬೆಳಗ್ಗಿನಿಂದ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು. ಇನ್ನು ಭಕ್ತರು ಸಹ ಭಕ್ತಿಭಾವದಿಂದ ಶ್ರೀ ರಾಮನ ಕೃಪೆಗೆ ಪಾತ್ರರಾದರು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ರಾಮ ಮಂದಿರವನ್ನು ದೀಪಾಲಂಕಾರ ಮತ್ತು ಹೂವಿನ ಅಲಂಕಾರದಿಂದ ಸಿಂಗರಿಸಿದ್ದು, ಇದರಿಂದಾಗಿ ದೇವಸ್ಥಾನಕ್ಕೆ ಮತ್ತಷ್ಟು ಮೆರುಗು ಬಂದಿತು. ಇನ್ನು ಭಕ್ತಾಧಿಗಳಿಗಾಗಿ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಪ್ರಸಾದ ರೀತಿಯಲ್ಲಿ ವಿನಿಯೋಗಿಸಲು ತಯಾರಿ ಕೂಡ ಬಲು ಜೋರಾಗಿತ್ತು.
ಆಂಜನೇಯ ದೇವಸ್ಥಾನಗಳಲ್ಲೂ ನೂರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಮನೆ ದೇವರನ್ನಾಗಿ ರಾಮನನ್ನು ಪೂಜಿಸುವವರು 9 ದಿನಗಳ ಕಾಲ ಹಬ್ಬವನ್ನು ಆಚರಿಸುತ್ತಾರೆ. ವಿಶೇಷವೆಂಬಂತೆ ರಾಮ- ರಹೀಮ ಎಲ್ಲರೂ ಒಂದೇ ಎಂಬ ಸಂದೇಶ ಸಾರುವಂತೆ ಸದಾಂ ಎಂಬ ನಿವಾಸಿ ದೇವಸ್ಥಾನಕ್ಕೆ ಭೇಟಿ ನೀಡಿ, ರಾಮನ ದರ್ಶನ ಪಡೆದರು.
ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಸದಾಂಗೆ ಸನ್ಮಾನ ಮಾಡಿ, ಸಂತಸ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸದಾಂ, ನಾನು ಮೂರು ವರ್ಷದಿಂದ ಗೋಪುರ, ರಥ ಸ್ವಚ್ಛ ಮಾಡುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.