ಬೆಂಗಳೂರು: ಅತೃಪ್ತ ಶಾಸಕರ ಸಂಬಂಧ ವಿಚಾರಣೆ ಮಾಡಿ ನಿಮ್ಮ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಅದರ ಪ್ರಕಾರ ಸಂಜೆಯೊಳಗೆ ನನ್ನ ನಿರ್ಧಾರವನ್ನು ಕೋರ್ಟ್ಗೆ ತಿಳಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹತ್ತು ಶಾಸಕರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಸಂಬಂಧ ವಿಚಾರಣೆ ಮಾಡುತ್ತೇನೆ. ಸಂಜೆಯೊಳಗಡೆ ಒಂದು ತೀರ್ಮಾನ ಮಾಡಿ, ಕೋರ್ಟ್ಗೆ ತಿಳಿಸಲಾಗುವುದು. ಜೊತೆಗೆ ಸುಪ್ರೀಂ ಕೋರ್ಟ್ಗೆ ನನ್ನ ಪರವಾಗಿ ವಕೀಲರು ಹಾಜರಾಗಲಿದ್ದಾರೆ ಎಂದು ತಿಳಿಸಿದರು.
ನನ್ನ ಪರ ವಕೀಲರು ಏನು ಹೇಳಬೇಕು ಅದನ್ನು ಕೋರ್ಟ್ನಲ್ಲಿ ಹೇಳುತ್ತಾರೆ. ಆಮೇಲೆ ಏನಾಗುತ್ತದೆ ನೋಡೋಣ. ಹತ್ತು ಜನ ಶಾಸಕರು ಮೊದಲು ಇಲ್ಲಿಗೆ ಬರಲಿ, ಪೊಲೀಸರು ಭದ್ರತೆ ಕೊಡುತ್ತಾರೆ. ಅವರು ಏನು ಹೇಳುತ್ತಾರೆ ಎಂದು ಕೇಳಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.