ಬೆಂಗಳೂರು: IMA ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಈಗಾಗಲೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು FIR ದಾಖಲಿಸಿದ್ದು, ಪ್ರಾಥಮಿಕ ತನಿಖೆ ನಡೆಸಿ ನಿರ್ದೇಶಕರನ್ನ ಬಂಧಿಸಿದ್ದಾರೆ. ಇನ್ನು ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ಎಸ್‌ಐಟಿಯ ಕೆಲಸವೇನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸರು ಪ್ರಾಥಮಿಕ ತನಿಖಾ ವರದಿಯನ್ನು ಡಿಐಜಿ ರವಿಕಾಂತೇಗೌಡರಿಗೆ ನೀಡಿದ್ದು, ಡಿಐಜಿ ನೇತೃತ್ವದ ತಂಡ ಪ್ರಕರಣವನ್ನ ಕೈಗೆತ್ತಿಕೊಂಡು ಈಗಾಗಲೇ ತನಿಖೆ ನಡೆಸುತ್ತಿದೆ.
ಹೇಗಿರುತ್ತೆ ತನಿಖೆ?
ಮೊದಲು ಐಎಂಎ ಪ್ರಕರಣದ ಅಧ್ಯಯನ ಮಾಡಬೇಕಾಗುತ್ತೆ. ಏಕೆಂದರೆ ಪ್ರಕರಣದಲ್ಲಿ 20 ಸಾವಿರ ಮಂದಿ ಈಗಾಗಲೇ ದೂರು ನೀಡಿದ್ದು, ದೂರು ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ದೂರು ನೀಡಿದ ಪ್ರತಿಯೊಬ್ಬರ ಹೇಳಿಕೆ ದಾಖಲಿಸಬೇಕು. 20 ಸಾವಿರ ದೂರುದಾರರ ಹೇಳಿಕೆ ದಾಖಲಿಸಬೇಕಾದ್ರೆ ಬಹಳ ದಿನ ಬೇಕಾಗುತ್ತೆ. ಒಂದು ದಿನ ಓರ್ವ ಸಿಬ್ಬಂದಿ 5-6 ಹೇಳಿಕೆ ದಾಖಲಿಸಬಹುದು, ಇನ್ನು ಪ್ರತಿಯೊಬ್ಬರ ಹೇಳಿಕೆ ದಾಖಲಿಸಲು ತಿಂಗಳುಗಳೇ ಬೇಕಾಗಬಹುದು.
ಹಾಗೆಯೇ, ಈ ಪ್ರಕರಣದಲ್ಲಿ ಈಗಾಗಲೇ ನಿಯೋಜನೆಗೊಂಡಿರುವ ಎಸ್‌ಐಟಿ ತಂಡಕ್ಕೆ ಪ್ರತ್ಯೇಕ ಕಚೇರಿ ವ್ಯವಸ್ಥೆ ಬೇಕಾಗುತ್ತೆ. ಅದರಲ್ಲೂ ತನಿಖೆಗೆ ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ತನಿಖಾಧಿಕಾರಿಗಳ ಜೊತೆ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ, ತನಿಖಾಧಿಕಾರಿಗಳಿಗೆ ವಾಹನ ಸೌಲಭ್ಯ ಬೇಕು. ಹೂಡಿಕೆದಾರರ ಹೇಳಿಕೆ ದಾಖಲಾದ ನಂತರ ಹೂಡಿಕೆದಾರರಿಗೆ ದುಡ್ಡನ್ನ ವಾಪಸ್ ನೀಡಲು ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಆಸ್ತಿ ಮುಟ್ಟುಗೋಲು ಹಾಕಬೇಕಾದ್ರೆ, ನ್ಯಾಯಾಲಯದಿಂದ ಅನುಮತಿಯನ್ನ ಎಸ್ಐಟಿ ಪಡೆಯಬೇಕು. ಒಟ್ಟಾರೆ ಪ್ರಕರಣದ ತನಿಖೆ ಮುಗಿಯಲು ಹಲವು ತಿಂಗಳು ಬೇಕು ಎಂದು ಪೊಲೀಸ್ ಮೂಲಗಳು ತಿಳಿಸಿವೆ.