ಬೆಂಗಳೂರು: ವಿಶ್ವಾಸಮತ ಯಾಚನೆ ಮಾಡದೇ ಶಾಸಕರ ರಾಜೀನಾಮೆ ವಿಚಾರದ ಕುರಿತಾಗಿ ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಮೇಲ್ಮನೆ ಬಿಜೆಪಿ ಸದಸ್ಯ ರವಿಕುಮಾರ್ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿ, ಕಾಂಗ್ರೆಸ್ ಜೆಡಿಎಸ್ ವಿಧಾನಸಭೆ ಕಲಾಪದಲ್ಲಿ ಅನಗತ್ಯ ವಿಷಯಗಳನ್ನ ಪ್ರಸ್ತಾಪಿಸುವ ಮೂಲಕ ಕಾಲಹರಣ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಸದಸ್ಯರು ಒಬ್ಬರಾದ ಮೇಲೆ ಒಬ್ಬರಂತೆ ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಪೂರ್ವ ನಿರ್ಧರಿತವಾಗಿ ಯೋಜನೆ ರೂಪಿಸಿ ಚರ್ಚೆ ಮಾಡುತ್ತಿದ್ದಾರೆ. ಸದನದಲ್ಲಿ ಶಾಸಕರು ಸಮಯ ಕಾಲಹರಣಕ್ಕೆ ಸ್ಪೀಕರ್ ಸಹ ಸಾಥ್ ಕೊಡುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರು ಮಧ್ಯಪ್ರವೇಶಿಸಲಿ:
ಇಂದು ನಾಳೆ ಹೀಗೆ ಸಮಯ ವ್ಯರ್ಥ ಮಾಡಿ, ಅತೃಪ್ತ ಶಾಸಕರನ್ನು ಮನವೊಲಿಸುವ ಪ್ಲ್ಯಾನ್ ರೂಪಿಸಿದ್ದಾರೆ. ರಾಜ್ಯಪಾಲರಲ್ಲಿ ಕೇಳಿಕೊಳ್ಳುತ್ತೇನೆ, ಇವತ್ತು ಸಾಂವಿಧಾನಿಕ ಬಿಕ್ಕಟ್ಟು ಶುರುವಾಗಿದೆ. ಹೀಗಾಗಿ ತಾವು ಮಧ್ಯಪ್ರವೇಶ ಮಾಡಬೇಕು. ಸಭಾಧ್ಯಕ್ಷರು ಎಲ್ಲರಿಗೂ ಕಾಲಾವಕಾಶ ಹೆಚ್ಚೆಚ್ಚು ನೀಡುತ್ತಿದ್ದಾರೆ. ಈ ಮೂಲಕ ವಿಶ್ವಾಸಮತ ಯಾಚನೆ ಮುಂದೂಡುವ ಪ್ಲಾನ್ ರೂಪಿಸಲಾಗಿದೆ ಎಂದು ದೂರಿದರು.