ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ, ಡಾ.ಜಿ. ಪರಮೇಶ್ವರ್, ಸಿದ್ದರಾಮಯ್ಯ ಪಾಲ್ಗೊಂಡು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೈರೇಗೌಡ ಪರವಾಗಿ ಮತಯಾಚನೆ ಮಾಡಿದರು.
ಸದಾನಂದ ಗೌಡರು ತಾವು ಮಾಡಿದ ಸಣ್ಣ ಕಾರ್ಯಕ್ರಮವನ್ನು ತೋರಿಸಿ ಮತಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ರೈತರ ಸಂಕಷ್ಟ ದೂರ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಐದು ವರ್ಷದಲ್ಲಿ ಸಣ್ಣ ಯೋಜನೆಯನ್ನೂ ರೈತರಿಗೆ ನೀಡಿಲ್ಲ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಾಲಮನ್ನಾ ಮಾಡಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಕೆ ಶಿಕ್ಷಣ ನೀಡಿಲ್ಲ. ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ವ್ಯಂಗ್ಯವಾಡಿದರು.

ಜಿಎಸ್‌ಟಿ ಜಾರಿಗೆ ತರುವ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ಕೃಷ್ಣಭೈರೇಗೌಡರು ಸಲಹೆ, ಸೂಚನೆ ನೀಡಿದ್ದರು. ಆದರೆ, ಇಂದು ಜಿಎಸ್‌ಟಿ ಬಡವರ ವಿರೋಧಿಯಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡವರು ಅಂಗಡಿಯನ್ನೇ ಮುಚ್ಚುವ ಸ್ಥಿತಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು,
ನಂತರ ಮೋದಿ ಸರಕಾರದಲ್ಲಿ ಬರೋಬ್ಬರಿ 14 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಲಾಗಿದೆ. ಬ್ಯಾರೆಲ್ ಬೆಲೆ ಕಡಿಮೆ ಇದ್ದಾಗಲೂ ಇಂಧನದ ಬೆಲೆ ಕಡಿಮೆ ಮಾಡಿಲ್ಲ. ಬ್ಯಾರೆಲ್ ಬೆಲೆ ಕಡಿಮೆಯಾಗಿದ್ದರಿಂದ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಉಳಿತಾಯವಾಗಿದೆ. ಆ ಹಣವೆಲ್ಲ ಎಲ್ಲಿ ಎಂದು ಪ್ರಶ್ನಿಸಿದರು?.