ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರು ಮನವೊಲಿಕೆಗೆ ಬಗ್ಗದಿರುವುದರಿಂದ ಅವರ ವಿರುದ್ಧ ಅನರ್ಹತೆ ಹಾಗೂ ಸಚಿವರಾಗುವುದನ್ನು ತಡೆಯುವ ಕಾನೂನು ಅಸ್ತ್ರ ಬಳಸಲು ಮೈತ್ರಿ ಪಕ್ಷದ ಮುಖಂಡರು ಮುಂದಾಗಿದ್ದಾರೆ.
ಅತೃಪ್ತರಿಗೆ ಬಿಜೆಪಿ ಜತೆ ಇರುವ ಸಂಬಂಧವನ್ನು ಉಲ್ಲೇಖಿಸಿ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಮೈತ್ರಿಯ ಅತೃಪ್ತರು ಪ್ರಕರಣ ಇತ್ಯರ್ಥಗೊಳ್ಳದೇ ಸಚಿವರಾಗುವುದನ್ನು ತಡೆಯುವ ಕಾನೂನು ಸಮರ ನಡೆಸುವ ಪ್ಲಾನ್ ಮೈತ್ರಿ ನಾಯಕರದ್ದಾಗಿದೆ.
ಆದರೆ ಮೈತ್ರಿ ಸರ್ಕಾರದ ಕಾನೂನು ಹೋರಾಟವನ್ನು ಆರಂಭದಲ್ಲೇ ವಿಫಲಗೊಳಿಸುವ ಪ್ಲಾನ್ಅನ್ನು ಬಿಜೆಪಿ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಮೈತ್ರಿ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿರುವ ರಮೇಶ್ ಕುಮಾರ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಸ್ಪೀಕರ್ ಚುನಾವಣೆ ನಡೆಸಲು ಮನವಿ ಸಲ್ಲಿಸಲಿದೆ. ಬಹುಮತದ ಕೊರತೆಯಿಂದ ದೋಸ್ತಿ ಪಕ್ಷಗಳ ಸ್ಪೀಕರ್ ಅಭ್ಯರ್ಥಿ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ತನ್ನ ಸ್ಪೀಕರ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿದೆ. ಸ್ಪೀಕರ್ ಬದಲಾವಣೆ ಆದರೆ ಸದನದಲ್ಲಿ ಮೈತ್ರಿ ಪಕ್ಷಗಳ ಎಲ್ಲ ಕಾನೂನು ಹೋರಾಟಗಳನ್ನು ವಿಫಲಗೊಳಿಸಬಹುದೆಂದು ಬಿಜೆಪಿ ಪ್ರತಿತಂತ್ರ ರೂಪಿಸಿದೆ ಎಂದು ತಿಳಿದು ಬಂದಿದೆ.
ಮೈತ್ರಿ ಸರ್ಕಾರ ಪತನಕ್ಕೆ ಹಾಗೂ ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ತೆರೆಮರೆಯಲ್ಲಿ ಕಮಲ ನಾಯಕರು ಹೈಕಮಾಂಡ್ ಮಾರ್ಗದರ್ಶನದಂತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಆಪರೇಷನ್ ಕಮಲದ ಆರೋಪ ಪಕ್ಷದ ಮೇಲೆ ಬರದಂತೆ ಎಚ್ಚರಿಕೆಯನ್ನೂ ಬಿಜೆಪಿ ವಹಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.