ಬೆಂಗಳೂರು: ಆಪರೇಷನ್ ಕಮಲ ಬಿರುಸುಗೊಂಡ ಹಿನ್ನೆಲೆ ದೋಸ್ತಿ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಇಂದು ಮೈತ್ರಿ ನಾಯಕರೆಲ್ಲ ಸೇರಿ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಈಗಾಗಲೇ ಸಭೆ ಆರಂಭವಾಗಿದೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಚಿವ ಸಂಪುಟ ಪುನಾರಚನೆ ಮಾಡುವ ಮೂಲಕ ಆಪರೇಷನ್ ಕಮಲ ಶಮನ ಮಾಡುವ ಕುರಿತು ಚರ್ಚೆ ನಡೆದಿದೆ. ಅತೃಪ್ತ ಶಾಸಕರನ್ನು ತಣ್ಣಗೆ ಮಾಡಲು ಈ ಮೂಲಕ ಪ್ರಯತ್ನ ಮುಂದುವರೆದಿದೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು, ಯಾರನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.
ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ಪಣತೊಟ್ಟಿರುವ ಮೈತ್ರಿ ನಾಯಕರು ಸಚಿವ ಸಂಪುಟ ಪುನಾರಚನೆಗೆ ನಿರ್ಧರಿಸಿದ್ದಾರೆ. ಈ ಸಂಬಂಧ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವರು. ಒಂದೊಮ್ಮೆ ಪುನರ್ ರಚನೆಯಿಂದ ಎದುರಾಗುವ ಸಮಸ್ಯೆ, ಬಂಡಾಯ, ಆತಂಕ ನಿವಾರಣೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಗಂಭೀರ ಚರ್ಚೆ ನಡೆದಿದೆ. ಸಮಸ್ಯೆ ಶಮನಕ್ಕೆ ಬಂದಿರುವ ವೇಣುಗೋಪಾಲ್ ಇಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಜೆಡಿಎಸ್ ಕಡೆಯಿಂದ ಸಿಎಂ ಕುಮಾರಸ್ವಾಮಿ ಮಾತ್ರ ಪಾಲ್ಗೊಂಡಿದ್ದಾರೆ.