ಬಸವಕಲ್ಯಾಣ: ರಾತ್ರಿ ವೇಳೆ ಯಾರು ಇಲ್ಲದ ಸಮಯ ನೋಡಿಕೊಂಡು ಮನೆ ಬೀಗ ಮುರಿದ ಕಳ್ಳರ ತಂಡವೊಂದು ಮನೆಯಲ್ಲಿಯೇ ಅಡುಗೆ ಮಾಡಿ ಉಂಡು ಹೋಗಿರುವ ಘಟನೆ ತಾಲೂಕಿನ ಮಂಠಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮಂಠಾಳದ ಮಹಾತ್ಮ ಗಾಂಧಿ ಶಾಲೆ ಪಕ್ಕದಲ್ಲಿರುವ ಬಸವರಾಜ ಕಾಶಪ್ಪ ಹೊನ್ನಪ್ಪನವರ ಎಂಬುವರ ಮನೆಗೆ ಕನ್ನ ಹಾಕಿರುವ ಕಳ್ಳರ ತಂಡ, ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಬಸವರಾಜ ಅವರು ತಮ್ಮ ಪತ್ನಿಯ ಚಿಕಿತ್ಸೆಗೆಂದು ಕಳೆದ 20 ದಿನಗಳಿಂದ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ಶನಿವಾರ ತಡರಾತ್ರಿ ಮನೆ ಹಿಂಬದಿ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಈ ಕೃತ್ಯವೆಸಗಿದ್ದಾರೆ.
ಮನೆಯಲ್ಲಿ ಅಲ್ಮೆರಾ ಸೇರಿದಂತೆ ಎಲ್ಲ ಕಡೆ ತಡಕಾಡಿರುವ ಕಳ್ಳರು, ಮನೆ ಜಗಲಿ ಮೇಲಿನ ದೇವರ ಸಾಮಗ್ರಿಗಳು ಸೇರಿದಂತೆ ಅಲ್ಮೆರಾ ಹಾಗೂ ಇತರ ಸ್ಥಳಗಳಲ್ಲಿ ಇದ್ದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಸುದ್ದಿ ತಿಳಿದ ಮಂಠಾಳ ಠಾಣೆ ಪಿಎಸ್‌ಐ ಬಸಲಿಂಗಪ್ಪ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಮನೆ ಮಾಲೀಕ ಬಸವರಾಜ ಅವರು ಬಂದಾಗ ಮಾತ್ರ ಕಳ್ಳತನವಾದ ವಸ್ತುಗಳ ಬಗ್ಗೆ ನಿಖರವಾದ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಡುಗೆ ಸಿದ್ಧಪಡಿಸಿ ಊಟ ಮಾಡಿದ ಕಳ್ಳರು:
ರಾತ್ರಿ ವೇಳೆ ಮನೆಗೆ ನುಗ್ಗಿದ್ದ ಕಳ್ಳರ ತಂಡ, ರಾತ್ರಿ ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಹೋಗಿರುವುದು ತಿಳಿದಿದೆ. ಭಾನುವಾರ ಮಧ್ಯಾಹ್ನ ಬಸವರಾಜ ಅವರ ಸಹೋದರ ರಾಜಕುಮಾರ ಎನ್ನುವರು ಮನೆಗೆ ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.