ಬೀದರ್: ಶೋಷಿತರು, ಪರಿಶಿಷ್ಟ ಜಾತಿ, ಬುಡಕಟ್ಟು ಸಮುದಾಯಕ್ಕೆ ಸರ್ಕಾರದ ಯೋಜನೆಗಳ ಮೂಲಕ ನೊಂದವರನ್ನು ಮುಖ್ಯವಾಹಿನಿಗೆ ತರುವ ಮಹತ್ವಾಕಾಂಕ್ಷಿ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆ ಈ ತಾಲೂಕಿನಲ್ಲಿ ಜನರಿಂದ ದೂರವಾಗಿದೆ. ಅಧಿಕಾರಿಗಳು ಕಚೇರಿಗೆ ಬರೋದಿಲ್ಲ. ಸಿಬ್ಬಂದಿ ಮೇಲೆ ಹಿಡಿತವಿಲ್ಲ. ಪ್ರಶ್ನೆ ಮಾಡಬೇಕಾದ ಜನಪ್ರತಿನಿಧಿಗಳು ಮೌನ ಮುರಿಯುತ್ತಿಲ್ಲ. ಹೀಗಾಗಿ ಬಡವರ ಪಾಲಿನ ಸಾಕಷ್ಟು ಯೋಜನೆಗಳು ಉಳ್ಳವರ ಪಾಲಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲೆಯ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಸಮಾಜ ಕಲ್ಯಾಣ ಇಲಾಖೆ ತಾಲೂಕು ಕಚೇರಿಗೆ ಅಧಿಕಾರಿ ಬರೋದು ವಾರಕ್ಕೊಮ್ಮೆ, ಹೀಗಾಗಿ ಸಿಬ್ಬಂದಿ ಹಿಡಿತ ತಪ್ಪಿ ಕರ್ತವ್ಯಕ್ಕೆ 'ಚಕ್ಕರ್' ಹಾಕ್ತಾರೆ. ಇದರಿಂದ ಶೋಷಣೆಗೊಳಗಾದ ಜನರು ಸರ್ಕಾರದ ಯೋಜನೆಗಳ ಬಗ್ಗೆ ಯಾರ ಬಳಿ ಹೊಗಿ ಕೇಳಬೇಕೆಂಬುದೇ ಗೊತ್ತಾಗದ ಹಾಗೆ ಆಗಿದೆ. ಹೀಗಾಗಿ ಸರ್ಕಾರದ ಅನುದಾನ ಅಧಿಕಾರಿಗಳೇ ಫಲಾನುಭವಿ ಪಟ್ಟಿ ತಯಾರಿಸಿ ಉಳ್ಳವರ ಪಾಲು ಮಾಡುತ್ತಾರೆ. ಇದು ಇಂದಿನ ಕಥೆ ಅಲ್ಲ. ಕಳೆದ ದಶಕಗಳಿಂದ ಈ ತಾಲೂಕಿನಲ್ಲಿ ಶೋಷಿತರ ಮೇಲೆ ನಡೆಯುತ್ತಿರುವ ಸರ್ಕಾರಿ ಅನ್ಯಾಯ ಅಂತಾರೆ ಸ್ಥಳೀಯ ಮುಖಂಡ ಇಮಾನುವೇಲ್.
ಬುಡಕಟ್ಟು ಸಮುದಾಯ, ದಲಿತರ ಬಡಾವಣೆಗಳ ರಸ್ತೆ ನಿರ್ಮಾಣಕ್ಕೆ ಎಸ್ಇಪಿ ಟಿಎಸ್ ಪಿ ಯೋಜನೆ ಅನುದಾನ ದುರ್ಬಳಕೆಯಾಗಿವೆ. ಲೇ ಔಟ್ ಗಳಲ್ಲಿ ಈ ಅನುದಾನ ಬಳಸಿ ಶೋಷಿತರ ಬಡಾವಣೆಗಳ ಸುಧಾರಣೆ ಮಾಡದೇ ಇಲಾಖೆ ಸುಮ್ಮನಾಗಿದೆ. ಅಲ್ಲದೇ ಸಣ್ಣ ಪುಟ್ಟ ಕೆಲಸಕ್ಕೂ ಜನರು ಕಚೇರಿ ಮುಂದೆ ವಾರಗಟ್ಟಲೆ ಕಾಯಬೇಕು. ತುರ್ತಾಗಿ ಕೆಲಸ ಆಗಬೇಕು ಎಂದರೆ ಮಧ್ಯವರ್ತಿಗಳ ಮೂಲಕ ಮಾಮೂಲು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು. ಇದು ಜವಾಬ್ದಾರಿಯುತ ಅಧಿಕಾರಿಗಳ ಕರ್ತವ್ಯಲೋಪ ಎದ್ದು ಕಾಣ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಿಸಲು ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಈ ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನಡೆಸುತ್ತಿರುವ 'ಅಂಧಾ ದರ್ಬಾರ್' ಕ್ಕೆ ಬ್ರೇಕ್ ಹಾಕುವ ಮೂಲಕ ಅರ್ಹ ಫಲಾನುಭವಿಗಳಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕಾಗಿದೆ.