ಬೀದರ್: ಕೊರೊನಾ ಸೋಂಕು ನಿಯಂತ್ರಣ ಕುರಿತು ಜಾಗೃತಿ ಅಭಿಯಾನ ಮೂಡಿಸಲು ಹೊರಟ ಪೊಲೀಸರ ಪಥ ಸಂಚಲನ ಗಮನ ಸೆಳೆಯಿತು. ಆದ್ರೆ ಪಥ ಸಂಚಲನದ ವೇಳೆಯಲ್ಲಿ ಸಾರ್ವಜನಿಕರು ಸಂತೆಯಲ್ಲಿ ಜಮಾಯಿಸಿದ್ದು ಸಾಮಾಜಿಕ ಅಂತರ ಸಾಮೂಹಿಕವಾಗಿ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.
ಜಿಲ್ಲೆಯ ಔರಾದ್ ಪಟ್ಟಣದ ಪೊಲೀಸ್ ಠಾಣೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಡಿವೈಎಸ್ಪಿ ಡಾ.ದೇವರಾಜ್ ಬಿ ನೇತೃತ್ವದಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಪೌರ ಕಾರ್ಮಿಕರ ಪಥ ಸಂಚಲನ ನಡೆಯಿತು.
ಪಥ ಸಂಚಲನದ ವೇಳೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಪೌರ ಕಾರ್ಮಿಕರು ಹಾಗೂ ಪೊಲೀಸರ ಸೇವೆಯನ್ನು ಗೌರವಿಸಿ ಸಾರ್ವಜನಿಕರು ಕೂಡ ಆರತಿ ಬೆಳಗಿ, ಹೂ ಚೆಲ್ಲುವ ಮೂಲಕ ಅಭಿನಂದಿಸಿದರು.
ಆದ್ರೆ ಪಥ ಸಂಚಲನ ವೇಳೆಯಲ್ಲಿ ಪಟ್ಟಣದ ತೆಲಿಗಲ್ಲಿಯ ಭಾಗದಲ್ಲಿ ನೂರಾರು ಜನರು ಸೇರಿಕೊಂಡು ಪೊಲೀಸರ ಮೇಲೆ ಹೂ ಹಾಕಿದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಸಾರ್ವಜನಿಕರು ಎಡವಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.