ಬೀದರ್: ರೈತರು ಈಗ ತಮ್ಮ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ನೀಡಲು ಕಚೇರಿ ಸುತ್ತಬೇಕಿಲ್ಲ. ಬೆಳೆಯ ಪರಿಸ್ಥಿತಿ ಕುರಿತು ರೈತರೇ ಖುದ್ದಾಗಿ ಫೋಟೋ ಅಪ್ಲೋಡ್ ಮಾಡಬಹುದಾಗಿದೆ. ಈ ವಿನೂತನ ಆ್ಯಪ್ ಮೂಲಕ ಬೆಳೆ ಸಮಿಕ್ಷೆ ಮಾಡುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ವೀಕ್ಷಣೆ ಮಾಡಿದರು.
ತಾಲೂಕಿನ ಅಷ್ಟೂರು ಗ್ರಾಮದ ರೈತ ಮಲ್ಲಪ್ಪ ಡೋಮಣೆ ಎಂಬುವರ ಜಮೀನಿನಲ್ಲಿ ರೈತರೇ ಬೆಳೆ ಸಮಿಕ್ಷೆ ಮಾಡುವುದನ್ನು ಪರಿಶೀಲನೆ ಮಾಡಿದರು. ಬೆಳೆ ಹಾನಿ ಕುರಿತು ವರದಿ ಸಿದ್ದಪಡಿಸಲು ಸಾಕಷ್ಟು ಸಮಯ ವ್ಯರ್ಥವಾಗ್ತಿತ್ತು. ಈ ನಡುವೆ ಬೆಳೆ ವಿಮೆ ಮಂಜೂರಾಗದೆ ಅದೆಷ್ಟೋ ರೈತರಿಗೆ ಅನ್ಯಾಯವಾಗುತ್ತಿತ್ತು. ಹೀಗಾಗಿ ಸರ್ಕಾರ ಬೆಳೆ ಸಮೀಕ್ಷೆ ಆ್ಯಪ್ ಜಾರಿಗೆ ತಂದಿದ್ದು, ರೈತರು ತಮ್ಮ ಜಮೀನಿನಲ್ಲಿ ನಿಂತು ಫೋಟೊ ಅಪ್ಲೋಡ್ ಮಾಡುವುದರಿಂದ ಬೆಳೆ ಸಮೀಕ್ಷೆ ಮಾಡುವ ಕಾರ್ಯ ಸುಲಭವಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.
2020-21ರ ಅವಧಿಯ ಬೆಳೆ ಸಮೀಕ್ಷೆಯನ್ನು ರೈತರು ಮಾಡುವುದರಿಂದ ಬೆಳೆ ವಿಮೆ ಹಾಗೂ ಸರ್ಕಾರ ರೈತರ ಸಂಕಷ್ಟಕ್ಕೆ ಸುಲಭವಾಗಿ ನೆರವಾಗಲು ಪೂರಕವಾಗಿದ್ದು ಈ ಆ್ಯಪ್ ಪದ್ದತಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತೆ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.