ಬಸವಕಲ್ಯಾಣ (ಬೀದರ್): ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪದಿಂದ ನೀಡಲಾಗುವ ಪ್ರತಿಷ್ಠಿತ ಡಾ. ಚನ್ನಬಸವ ಪಟ್ಟದೇವರು ಅನುಭವ ಮಂಟಪ ಪ್ರಶಸ್ತಿಗೆ ಧಾರವಾಡದ ಮನಗುಂಡಿ ಮಹಾಮನೆಯ ಬಸವಾನಂದ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ.
ನ.23 ಮತ್ತು 24ರಂದು ನಡೆಯುವ 40ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ. 50 ಸಾವಿರ ರೂ. ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು 1999ರಿಂದ ನೀಡಲಾಗುತ್ತಿದ್ದು, ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಹಾಗೂ ಶಾಸಕ ಈಶ್ವರ ಖಂಡ್ರೆಯವರು ಪ್ರಶಸ್ತಿಯ ದಾಸೋಹಿಗಳಾಗಿದ್ದಾರೆ.
ಬಸವಾನಂದ ಸ್ವಾಮೀಜಿಯವರಿಗೆ 9 ತಿಂಗಳ ಮಗುವಾಗಿರುವಾಗಲೇ ದೃಷ್ಟಿಹೀನತೆ ಆವರಿಸಿತು. 8ನೇ ವಯಸ್ಸಿಗೆ ಮೈಸೂರಿನ ಅಂಧ ಮಕ್ಕಳ ಪಾಠಶಾಲೆಗೆ ಸೇರಿದ ಇವರು, 1992ರಲ್ಲಿ ಪಿಯುಸಿ ಪೂರೈಸಿದ್ದಾರೆ. ದೃಷ್ಟಿಯಿಲ್ಲದಿದ್ದರೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರ ಮೇಲೆ ಬಸವಾದಿ ಶರಣರ ವಚನ ಸಾಹಿತ್ಯ ಗಾಢವಾದ ಪ್ರಭಾವ ಬೀರಿತ್ತು.
ಸ್ವಾಮೀಜಿಯವರು ಧಾರವಾಡದ ಮನಗುಂಡಿ ಗ್ರಾಮದಲ್ಲಿ ಶ್ರೀಗುರು ಬಸವ ಮಹಾಮನೆ ಸ್ಥಾಪಿಸಿಕೊಂಡು ಆಧ್ಯಾತ್ಮ ಪ್ರವಚನದಲ್ಲಿ ತೊಡಗಿಸಿಕೊಂಡಿದ್ದಾರೆ. ಬಸವ ತತ್ವ ಪ್ರಚಾರ, ಪ್ರಸಾರದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಗಳ ಸೇವೆಯನ್ನು ಗುರುತಿಸಿ ಡಾ.ಚನ್ನಬಸವ ಪಟ್ಟದೇವರು ಅನುಭವಮಂಟಪ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.