ಬೀದರ್: ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ, ಆಡಳಿತಾರೂಢ ಬಿಜೆಪಿಗೆ ಬೀದರ್ನಲ್ಲಿ ಸೋಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ರಾಜ್ಯ ಸಚಿವ ಪ್ರಭು ಚವ್ಹಾಣ ಸಚಿವರಿಬ್ಬರ ಡಬಲ್ ಇಂಜನ್ ಸರ್ಕಾರ ಎಂದೇ ಖ್ಯಾತಿಯಾದ ಜೋಡಿಗೆ ಸೆಡ್ಡು ಹೊಡೆದು ಕಾಂಗ್ರೆಸ್ನ ಬಾಹುಬಲಿಯಾಗಿ ಭೀಮರಾವ್ ಪಾಟೀಲ್ ವಿಜಯ ಪತಾಕೆ ಹಾರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಪ್ರತಿಸ್ಪರ್ಧಿ ಬಿಜೆಪಿಯ ಪ್ರಕಾಶ್ ಖಂಡ್ರೆ ಅವರನ್ನು ಸೋಲಿಸಿ ಬರೋಬ್ಬರಿ 227 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ಇಬ್ಬರು ಸಚಿವರಿಗೆ ಭಾರಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1,789 ಮತಗಳು ಪಡೆದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ 1,562 ಮತಗಳು ಪಡೆದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗೊವಿಂದರಾವ್ 15 ಮತಗಳು ಪಡೆದರೆ, 84 ಮತಗಳು ತಿರಸ್ಕೃತವಾಗಿವೆ.
ಪ್ರತಿಷ್ಠೆಯ ಕಣವಾಗಿದ್ದ ಬೀದರ್:
ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೀದರ್ ಪರಿಷತ್ ಅಖಾಡದಲ್ಲಿ ಅಭ್ಯರ್ಥಿ ಗೆಲ್ಲಿಸಲೇಬೇಕು ಎಂದು ಬಿಜೆಪಿ ಪಾಳಯ ಪ್ರತಿಷ್ಠೆಗೆ ತೆಗೆದುಕೊಂಡು ಪ್ರಚಾರ ಮಾಡಿದ್ದರು. ಕಾಂಗ್ರೆಸ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಗಳು ಮಾಡಿದ್ದರು. ಪರಿಣಾಮ ಸ್ಥಳೀಯ ಸಂಸ್ಥೆಗಳ ಮತದಾರ 'ಕೈ' ಗೆ ಜೈ ಅಂದಿದ್ದಾರೆ.
ವೈಯಕ್ತಿಕ ಆರೋಪ ಪ್ರತ್ಯಾರೋಪ:
ಪರಿಷತ್ ಚುನಾವಣೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ನಡುವೆ ನೇರವಾದ ವೈಯಕ್ತಿಕ ಆರೋಪಗಳು ನಡೆದವು. ಚುನಾವಣೆ ಪ್ರಚಾರದ ವೇಳೆಯಲ್ಲಿ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ 5 ಲಕ್ಷ ರೂಪಾಯಿ ಮೌಲ್ಯದ ಕನ್ನಡಕ ಹಾಕುತ್ತಾರೆ. ಈಶ್ವರ್ ಖಂಡ್ರೆ ಮನೆ ಮುರುಕ ಎಂದು ಸಚಿವ ಖೂಬಾ ಹೇಳಿದ್ದೆ, ಚುನಾವಣೆ ಕಾವು ಜಾಸ್ತಿಯಾಗಿ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿತ್ತು.
ಚುನಾವಣೆ ದಿನ ಜಿದ್ದಾ ಜಿದ್ದಿ :
ಚುನಾವಣೆ ಮತದಾನದ ವೇಳೆಯಲ್ಲಿ ಭಾಲ್ಕಿ ತಾಲೂಕಿನಲ್ಲಿ ಈಶ್ವರ್ ಖಂಡ್ರೆ ಹಿಂದೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಬೆನ್ನು ಬಿದ್ದರೆ. ಔರಾದ್ ತಾಲೂಕಿನಲ್ಲಿ ಸಚಿವ ಪ್ರಭು ಚವ್ಹಾಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಫಾಲೋ ಮಾಡಿದ್ದರು. ಎರಡು ಪಕ್ಷಗಳ ಹೈಡ್ರಾಮಾ ಮತಗಟ್ಟೆಗಳ ಸುತ್ತಲು ನಡೆದು ಜಿದ್ದಾ ಜಿದ್ದಿಗೆ ಕಾರಣವಾಗಿತ್ತು.
ಜಿಲ್ಲೆಯಲ್ಲಿ ಬಲವಾಯ್ತು ಪಾಟೀಲ್ ಪರಿವಾರ:
ಹುಮನಾಬಾದ್ ಪಾಟೀಲ್ ಪರಿವಾರ ಜಿಲ್ಲಾ ರಾಜಕಾರಣದಲ್ಲಿ ಇಂದಿನ ಬಲವಾಗಿ ಬೇರು ಸ್ಥಾಪಿಸಿದೆ. ಹುಮನಾಬಾದ್ ನಲ್ಲಿ ರಾಜಶೇಖರ್ ಪಾಟೀಲ್ ಶಾಸಕರಾಗಿದ್ದಾರೆ. ಅವರ ಸಹೋದರ ಪದವೀಧರ ಕ್ಷೇತ್ರದಿಂದ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಇದೀಗ ಸ್ಥಳೀಯ ಸಂಸ್ಥೆಯಿಂದ ಭೀಮರಾವ್ ಪಾಟೀಲ್ ಅವರು ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ಪ್ರಬಲ ರಾಜಕೀಯ ಕುಟುಂಬವಾಗಿ ಹೊರ ಹೊಮ್ಮಿದೆ.