ಬೀದರ್: ನೈಸ್ ಸಂಸ್ಥೆ ಮುಖ್ಯಸ್ಥ ಮಾಜಿ ಶಾಸಕ ಅಶೋಕ ಖೇಣಿ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಮುಜುಗರಕ್ಕೀಡು ಮಾಡಿದರು. ಇನ್ನು ಇದಕ್ಕೆ ಪ್ರತಿಯಾಗಿ ಕೈ ಕಾರ್ಯಕರ್ತರು ಚೌಕಿದಾರ್ ಚೋರ್ ಹೈ ಎಂದು ಹೇಳಿದ್ರು. ಇದು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ವಾಕ್ಸಮರಕ್ಕೆ ಸಾಕ್ಷಿಯಾಯ್ತು.
ಜಿಲ್ಲೆಯ ಹುಮನಾಬಾದ್ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಚುನಾವಣೆ ಪ್ರಚಾರಕ್ಕಾಗಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಬಂದರು. ಅಲ್ಲಿ ಮೊದಲೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರದಲ್ಲಿದ್ದ ಕಾರ್ಯಕರ್ತರು ಅಶೋಕ ಖೇಣಿ ಅವರನ್ನು ನೋಡುತ್ತಿದ್ದಂತೆ ಮೋದಿ ಮೋದಿ ಎಂದು ಕಿರುಚಾಡಲು ಆರಂಭಿಸಿದರು.
ಇದನ್ನು ನಗು ನಗುತ್ತಲೆ ಪ್ರತಿಕ್ರಿಯಿಸಿದ ಖೇಣಿ ಹಾಗೆ ಮುನ್ನಡೆದರು. ಆದರೆ ಸ್ಥಳದಲ್ಲೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಚೌಕಿದಾರ ಚೋರ್ ಹೈ ಎಂದು ಕೂಗಲಾರಂಭಿಸಿದರು. ಈ ವೇಳೆಯಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.