ಬೆಂಗಳೂರು: ಬೀದರ್ ನಗರದಲ್ಲಿ ಕೋವಿಡ್ – 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬೀದರ್ ನಗರ ಸಭೆ ಚುನಾವಣೆ ಮುಂದೂಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಕೋವಿಡ್ – 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಈ ಸಂಬಂಧ ತಾವು ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದೀರಿ. ಆ ಜಿಲ್ಲೆಗಳ ಪೈಕಿ ಬೀದರ್ ನಗರವು ಒಂದಾಗಿದ್ದು, ಕೋವಿಡ್ - 19 ಮೊದಲನೆ ಅಲೆಗೆ ಹೋಲಿಕೆ ಮಾಡಿದರೆ ಬೀದರ್ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಪ್ರತಿದಿನ 250ಕ್ಕೂ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಯೂ ಮಹಾರಾಷ್ಟ್ರ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ನಗರ ಸಭೆ ಚುನಾವಣೆ ನಡೆಸುವುದು ಸೂಕ್ತವೆನಿಸುತ್ತಿಲ್ಲ. ಆದ ಕಾರಣ ತಾವು ಸಾರ್ವಜನಿಕರ ಹಿತದೃಷ್ಠಿಯಿಂದ ನಗರ ಸಭೆ ಚುನಾವಣೆಯನ್ನು ಮುಂದೂಡಬೇಕೆಂದು ಪತ್ರದ ಮೂಲಕ ಸಿಎಂ ಗೆ ಬಂಡೆಪ್ಪ ಕಾಶೆಂಪುರ ಮನವಿ ಮಾಡಿದ್ದಾರೆ.