ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಬಳಿ ನಿರ್ಮಾಣಗೊಂಡಿರುವ ಸಿಂಗಟಾಲೂರು ಏತ ನೀರಾವರಿ ಡ್ಯಾಂ ಬಳಿ ಹಚ್ಚ ಹಸಿರಿನ ತಾಣ ನಿರ್ವಹಣೆ ಇಲ್ಲದೇ ಒಣಗಿ ಹೋಗಿದೆ.
ಶಾಲಾ - ಕಾಲೇಜು ರಜಾ ದಿನಗಳಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು ಡ್ಯಾಂ ವೀಕ್ಷಣೆ ಮಾಡಲು ಆಗಮಿಸುತ್ತಾರೆ. ಈ ಉದ್ಯಾನವು ನದಿ ತಟದಲ್ಲೇ ಇದ್ದರೂ ಎಲ್ಲ ಗಿಡ- ಮರಗಳು, ಸುಂದರ ಹೂ, ಬಳ್ಳಿ ಹಾಗೂ ನೆಲಕ್ಕೆ ಹಸಿರು ಹೊದ್ದ ಹುಲ್ಲು ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ.
ಡ್ಯಾಂ ಸುತ್ತಮುತ್ತ ಸುಂದರ ಪ್ರಕೃತಿ ಸೌಂದರ್ಯವಿದೆ. ಸಂಜೆಯಾಗುತ್ತಲೇ ಹಿನ್ನೀರಿನಲ್ಲಿ ಚಿಲಿಪಿಲಿ ಶಬ್ದ ಮಾಡುವ ನಾನಾ ಜಾತಿಯ ಪಕ್ಷಿ ಸಂಕುಲದ ಕಲವರ, ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ, ಬಂದ ಪ್ರವಾಸಿಗರು ವಿಧಿ ಇಲ್ಲದೇ ಒಣಗಿದ ಉದ್ಯಾನದಲ್ಲಿರುವ ಗಿಡದಡಿ ಕುಳಿತುಕೊಂಡೇ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ.
ಉತ್ತರ ಕರ್ನಾಟಕ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್ ಬಳಿ ಕರ್ನಾಟಕ ನೀರಾವರಿ ನಿಗಮವು 2.35 ಕೋಟಿ ರೂ.ಗಳ ವೆಚ್ಚದಲ್ಲಿ ಸುಂದರ ಉದ್ಯಾವನ ನಿರ್ಮಾಣ ಮಾಡಿತ್ತು. ಮುಳ್ಳು ಗಿಡಗಂಟೆ ಹಾಗೂ ತಗ್ಗು ಗುಂಡಿಗಳಿಂದ ತುಂಬಿಕೊಂಡಿದ್ದ ನದಿ ತೀರವನ್ನು ಹಚ್ಚ ಹಸಿರಿನ ಸುಂದರಮಯ ಪ್ರಕೃತಿ ತಾಣವಾಗಿಸಿತ್ತು. ಬ್ಯಾರೇಜ್ ನಿರ್ಮಾಣದ ವೇಳೆಯಲ್ಲಿ ಹೊರ ಹಾಕಲಾಗಿದ್ದ ದೊಡ್ಡ ಗಾತ್ರದ ಕಲ್ಲು ಬಂಡೆಗಳು ಹಚ್ಚ ಹಸಿರಿನ ನಡುವೆ ಸುಂದರ ಕಲಾಕೃತಿಗಳಂತೆ ಕಂಗೊಳಿಸುತ್ತಿದ್ದವು.
ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 1 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಉದ್ಯಾನದಲ್ಲಿ ತಂಗುದಾಣ, ಸಣ್ಣ-ಪುಟ್ಟ ಗುಡ್ಡ ಗಾಡು ಪ್ರದೇಶ, ನೆಲ ಕಾಣದಂತೆ ಎಲ್ಲ ಕಡೆಗೂ ಹಸಿರು ಹುಲ್ಲಿನ ಹಾಸಿಗೆ, ಸಂಜೆ ಹೊತ್ತು ಪ್ರಕೃತಿಯ ಸೌಂದರ್ಯ ಸವಿಯಲಿಕ್ಕೆ ಸಂಚರಿಸುವ ದಾರಿಯೂದ್ದಕ್ಕೂ ವಿವಿಧ ಬಗೆಯ ಸುಂದರವಾಗಿರುವ ಗಿಡಗಳು, ಮರಗಳು, ಬಳ್ಳಿಗಳು ಸೇರಿದಂತೆ ಎತ್ತ ನೋಡಿದತ್ತ ಹಸಿರು ಕಾಣುತ್ತಿತ್ತು. ಆದರೆ ಗುತ್ತಿಗೆದಾರರ ನಿರ್ವಹಣೆ ಕೊರತೆಯಿಂದ ಹಸಿರಿಲ್ಲದೇ ಇದೀಗ ಭಣ ಗುಡುತ್ತಿದೆ.
ಉದ್ಯಾನವನದಲ್ಲಿ ರಾತ್ರಿ ಸಮಯ ಸುಂದರ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿತ್ತು. ಈ ಪ್ರಕೃತಿಯ ಸವಿಯನ್ನು ಸವಿಯಲು ಪ್ರತಿ ಭಾನುವಾರ ಶಾಲಾ ಮಕ್ಕಳು ಮತ್ತು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಂಜೆ ತನಕ ಕಾಲ ಕಳೆಯಲು ಪ್ರವಾಸಿಗರೂ ಬರುತ್ತಿದ್ದರು. ಇದೀಗ ಅದೆಲ್ಲವೂ ಮಾಯವಾಗಿಬಿಟ್ಟಿದೆ.
ಈ ಉದ್ಯಾನ ನಿರ್ವಹಣೆಗೆ ನೀರಾವರಿ ನಿಗಮದಿಂದ ಯಾವುದೇ ಅನುದಾನ ಬಂದಿಲ್ಲ. ಉದ್ಯಾನದಲ್ಲಿ ಸಾಕಷ್ಟು ಗಿಡಗಂಟೆಗಳನ್ನು ಕಾರ್ಮಿಕರಿಂದ ತೆರವು ಮಾಡಿಸಿದ್ದೇವೆ. ಇನ್ನು ಹೆಚ್ಚಿನ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ 50 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ರಾಘವೇಂದ್ರ ತಿಳಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್ ಬಳಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಉದ್ಯಾನ ನಿರ್ಮಿಸಿದ್ದಾರೆಯೇ ಹೊರತು ಅದರ ನಿರ್ವಹಣೆ ಸರಿಯಾಗಿಲ್ಲ. ಉದ್ಯಾನಕ್ಕೆ ಬಂದ ಪ್ರವಾಸಿಗರಿಗೆ ಒಂದು ರೀತಿಯ ನಿರಾಸೆ ಭಾವನೆ ಮೂಡುತ್ತಿದೆ. ಈ ಉದ್ಯಾನಕ್ಕೆಂದು ಇದ್ದ ಕೊಳವೆ ಬಾವಿಯಲ್ಲೂ ಕೂಡ ಸಮರ್ಪಕ ನೀರಿಲ್ಲದೇ ಒಣಗಿ ಹೋಗಿದೆ ಎಂದು ಪ್ರವಾಸಿಗರು ದೂರಿದ್ದಾರೆ.