ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನ ಅಬ್ಬರ ಮಧ್ಯೆಯೂ ಕೂಡ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ರಸಗೊಬ್ಬರ, ಕೀಟನಾಶಕ ಔಷಧಿ ಮತ್ತು ಬೀಜ ಖರೀದಿ ಭರಾಟೆ ಜೋರಾಗಿದೆ.
ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಾರಂಭಕ್ಕೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ ಬಳ್ಳಾರಿ ತಾಲೂಕಿನ ನೂರಾರು ರೈತರು ರಸಗೊಬ್ಬರದ ಅಂಗಡಿಗಳ ಮುಂದೆ ಸಾಲಾಗಿ ನಿಂತುಕೊಂಡು ಕೃಷಿ ಚಟುವಟಿಕೆಗೆ ಬೇಕಾಗುವ ಅಗತ್ಯ ಪರಿಕರಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಅಂಗಡಿ ಮಾಲೀಕರು ದುಪ್ಪಟ್ಟು ದರದಲ್ಲಿ ರಸಗೊಬ್ಬರ, ಕೀಟನಾಶಕ ಔಷಧಿ ಮತ್ತು ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿ ನೋಡಿದಾಗ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸೇರಿದಂತೆ ಕ್ರಿಮಿನಾಶಕ ಔಷಧಿಗಳ ಮಾರಾಟದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ, ಅನಿವಾರ್ಯವಾಗಿ ದುಪ್ಪಟ್ಟು ದರದಲ್ಲೇ ಈ ಕೃಷಿ ಪರಿಕರಗಳ ಖರೀದಿ ಮಾಡೋ ಪರಿಸ್ಥಿತಿ ರೈತಾಪಿವರ್ಗಕ್ಕೆ ಬಂದೊದಗಿದೆ.
ಒಂದೆಡೆ ರೈತರು ತಾವು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಸಿಗದಿರೋದರಿಂದ ಮಾರುಕಟ್ಟೆಗೆ ಸಾಗಿಸಲಾರದೇ ಗೋದಾಮಿನಲ್ಲಿ ದಾಸ್ತಾನು ಮಾಡಿಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆಗಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ, ಕೃಷಿ ಚಟುವಟಿಕೆಗೆ ಅಗತ್ಯ ಇರುವ ಪರಿಕರಗಳ ಖರೀದಿಗೂ ಸಹ ದುಬಾರಿ ಬೆಲೆ ತೆರಬೇಕಾಗಿದೆ.