ಬಳ್ಳಾರಿ: ಇಂದು ಜಿಲ್ಲೆಯಲ್ಲಿ ಒಂಬತ್ತು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜಸ್ಥಾನ ಮೂಲದಿಂದ ಬಂದಂತಹ ಈ 9 ಮಂದಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕಳೆದ ವಾರ ಜಿಲ್ಲೆಯ ಹಡಗಲಿ ತಾಲೂಕಿನ ತಂಬ್ರಹಳ್ಳಿ, ಸೋಮಸಮುದ್ರ ಹಾಗೂ ನೆರೆಯ ಆಂಧ್ರ ಪ್ರದೇಶದ ಗುಂತಕಲ್ಲು ಮೂಲದಿಂದ ಜಿಲ್ಲೆಗೆ ಆಗಮಿಸಿದ್ದರು.
ಉದ್ಯೋಗ ಅರಸಿ ಆ ರಾಜ್ಯಗಳಿಗೆ ತೆರಳಿದ್ದ ಇವರನ್ನ ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಟಗಟ್ಟೆ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಿನ್ನೆ ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು, ಸೋಂಕು ಇರುವುದು ಖಾತ್ರಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ವರೆಗೂ 27 ಮಂದಿ ಸೋಂಕಿತರು ಗುಣಮುಖರಾಗಿದ್ದು, ಕೇವಲ ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. 19 ಮಂದಿ ಐಸೋಲೇಷನ್ನಲ್ಲಿದ್ದಾರೆ.