ಬಳ್ಳಾರಿ: ಗಣಿಜಿಲ್ಲೆಯ ಸುಸಜ್ಜಿತ ಯುಜಿಡಿ ಕಾಮಗಾರಿಗೆ ಅಂದಾಜು 210 ಕೋಟಿ ರೂ. ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ಬಳ್ಳಾರಿ ನಗರ ಹೊರವಲಯದ ಬಿ.ಗೋನಾಳ್ ಗ್ರಾಮದ ಬಳಿ ಇಂದು ಸಚಿವ ಬೈರತಿ ಬಸವರಾಜ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 101.98 ಎಕರೆ ಪ್ರಸ್ಥಾಪಿತ ವಸತಿ ಯೋಜನೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕಾಗಿ ಬುಡಾ, ಬಳ್ಳಾರಿ ಹಾಗೂ ಬಿ.ಗೋನಾಳ್ ಗ್ರಾಮದ ರೈತರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಬೈರತಿ ಬಸವರಾಜ್ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಯುಜಿಡಿ ಕಾಮಗಾರಿಯನ್ನ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಅಂದಾಜು 210 ಕೋಟಿ ರೂ.ಗಳನ್ನ ಕ್ಯಾಬಿನೆಟ್ನಲ್ಲಿ ನಿಗದಿಪಡಿಸಲಾಗುವುದು ಎಂದರು. ಈ ವಸತಿ ಯೋಜನೆಯ ಪ್ರಾಜೆಕ್ಟ್ ಮುಗಿಸಿಕೊಂಡು ಮುಂದಿನ ದಿನಗಳಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತಷ್ಟು ವಸತಿ ಸೌಲಭ್ಯ ಒದಗಿಸಿಕೊಡುವಲ್ಲಿ ಬುಡಾ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಎಂಎಲ್ಸಿ ಕೊಂಡಯ್ಯ, ಬುಡಾ ಆಯುಕ್ತ ಈರಣ್ಣ, ಮಹಾನಗರ ಪಾಲಿಕೆ ಆಯುಕ್ತೆ ತುಷಾರ ಮಣಿ ಇದ್ದರು.