ವಿಜಯನಗರ: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಇಂದು ಅದ್ಧೂರಿ ವಿವಾಹವೊಂದು ನಡೆಯಿತು. ಬೆಲ್ಜಿಯಂ ದೇಶದ ಯುವತಿ ಭಾರತದ, ಅದೂ ನಮ್ಮ ಕರ್ನಾಟಕದ ವಿಜಯನಗರದ ಯುವಕನೋರ್ವನ ಜೊತೆ ಹಸೆಮಣೆ ಏರಿದ್ದಾಳೆ.
ಭಾರತೀಯ, ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಈ ಯುವತಿಯ ಹೆಸರು ಕೆಮಿಲ್. ಇಂದು ಬೆಳಗ್ಗೆ 9.25 ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅನಂತರಾಜು ಅವರನ್ನು ಕೆಮಿಲ್ ತನ್ನ ಬಾಳಸಂಗಾತಿಯಾಗಿ ವರಿಸಿದರು. ಸುಮಾರು ನಾಲೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇಂದು ಹಸೆಮಣೆ ಏರಿದರು.
ಅನಂತರಾಜು ಹಂಪಿಯಲ್ಲಿ ಆಟೋ ಚಾಲಕನಾಗಿ, ಗೈಡ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಕೆಮಿಲ್ ಬೆಲ್ಜಿಯಂನಲ್ಲಿ ಸಮಾಜ ಸೇವಕಿಯಾಗಿ ಒಂದು ಎನ್ಜಿಒ ನಡೆಸುತ್ತಿದ್ದಾರೆ. ನಾಲೈದು ವರ್ಷಗಳ ಹಿಂದೆ ಪ್ರವಾಸಕ್ಕೆಂದು ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬವು ಅನಂತರಾಜು ಅವರ ಸಹಾಯ ಪಡೆದಿತ್ತು. ಆ ಸಂದರ್ಭದಲ್ಲಿ ಅನಂತರಾಜು ಅವರ ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬಸ್ಥರು ಮನಸೋತಿದ್ದರು.
ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ ಕೆಮಿಲ್ ಹಾಗೂ ಅನಂತರಾಜು ಮೂರು ವರ್ಷಗಳ ಹಿಂದೆಯೇ ಪ್ರೇಮ ವಿವಾಹ ಆಗಬೇಕಿತ್ತು. ಆದರೆ, ಕೊರೊನಾ ಇವರ ವಿವಾಹಕ್ಕೆ ಅಡ್ಡಿಪಡಿಸಿತ್ತು. ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ಧೂರಿಯಾಗಿ ಮಾಡಬೇಕು ಎಂದು ಪೋಷಕರು ಅಂದುಕೊಂಡಿದ್ದರಂತೆ. ಆದರೆ, ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆ ಆಗಬೇಕೆಂದು ಅನಂತರಾಜು ಹಾಗೂ ಕುಟುಂಬದವರು ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.
ಅಂದಹಾಗೆ, ಅನಂತರಾಜು ಹಂಪಿ ಜನತಾ ಪ್ಲಾಟ್‌ನ ರೇಣುಕಮ್ಮ ದಿ.ಅಂಜಿನಪ್ಪ ಅವರ ಪುತ್ರ. ಹಂಪಿಯ ಜನರು ಈ ಅಪರೂಪದ ಮದುವೆಗೆ ಸಾಕ್ಷಿಯಾದರು.
ಇದನ್ನೂ ಓದಿ: ಸಪ್ತಸಾಗರ ದಾಟಿ ಬಂದು ಭಾರತದ ಯವಕನೊಂದಿಗೆ ಸಪ್ತಪದಿ ತುಳಿದ ಅಮೆರಿಕದ ವೈದ್ಯೆ